Saturday, November 3, 2018


                      Sonerila lateritica.
One of the latest discoveries from the Western Ghats.



ಅವಳಿಗೆಷ್ಟು ಸ್ವಾಭಿಮಾನ ಅಂದ್ರೆ...

ಇನ್ಯಾರದೋ‌ ಆಸರೆಯ ಹಂಗ್ಯಾಕೆ ಅನ್ನಿಸಿರ್ಬೇಕು,
ತಾನೇ ಗಿಡವಾಗಿ ಗಿಡವೇ ಹೂವಾಗಿ ಅರಳಿ ನಿಂತಿದ್ದಾಳೆ..!!


ಈ ಹೂವಿನ ಕುರಿತು ಒಂದಿಷ್ಟು....

ಕೇವಲ ಎಂಟರಿಂದ ಹತ್ತು ಸೆಂಟೀಮೀಟರ್ ಎತ್ತರ ಹೊಂದಿರುವ,ಬಂಡೆಗಳಂಚಿನ ಕೊರಕಲುಗಳಲ್ಲಿ ಬೆಳೆಯೋ ಈ ಗುಲಾಬಿ ಮೈಬಣ್ಣದ ಹೂವಿನ ಗಿಡ 2018 ರ ವರೆಗೂ ಜಗತ್ತಿನ ಸಸ್ಯಶಾಸ್ತ್ರಜ್ಞರ ಕಣ್ಣಿಗೆ ಕಾಣಿಸಿಕೊಂಡಿರದ ಕಾರಣವೋ ಅಥವಾ ಜೀವ ತಳೆದೇ ಇರದ ಕಾರಣಕ್ಕೋ ಈ ಹೂವಿನ ಪ್ರಜಾತಿ ತನ್ನ ಅಸ್ತಿತ್ವವನ್ನೇ ಹೊಂದಿರಲಿಲ್ಲ ಸಸ್ಯಶಾಸ್ತ್ರದಲ್ಲಿ.

ಈ ವರ್ಷವಷ್ಟೇ ಕೇರಳದ ಕ್ಯಾಲಿಕಟ್ ಯೂನಿವರ್ಸಿಟಿಯ ಪ್ರೊಫೆಸರ್ ರೇಸ್ಮೀ ಮತ್ತವರ ತಂಡ ಕಾಡಿನಲ್ಲಿ ಮತ್ಯಾವುದೋ ಸಂಶೋಧನೆಯಲ್ಲಿ ತೊಡಗಿದ್ದಾಗ ಕಣ್ಣಿಗೆ ಬಿದ್ದು ಅಧ್ಯಯನ ನಡೆಸಿ ಅದರ ವಂಶಾವಳಿಗಳನ್ನು ಶೋಧಿಸಿ ಅದು mint family (Lamiaceae) ಗೆ ಸೇರಿದ್ದೆಂಬ ಅಂಶದ ಜೊತೆಗೆ
 ಅದಕ್ಕೊಂದು Sonerila lateritica ಎಂಬ ಹೆಸರನ್ನೂ ನೀಡಿ ಜಗತ್ತಿಗೆ ಅನಾವರಣಗೊಳಿಸಿದ್ದಾರೆ.
ಈ ಮೂಲಕ ಈ ಗುಲಾಬಿಚೆಲುವೆ ಸಸ್ಯಶಾಸ್ತ್ರದ ಪುಸ್ತಕಗಳಲ್ಲಿ ಅತೀವಿರಳ ಪುಟ್ಟ ಸಸ್ಯಗಳ ಸಾಲಿನಲ್ಲಿ ಶಾಶ್ವತ ಸ್ಥಾನವೊಂದನ್ನು ಪಡೆದುಕೊಂಡಿದೆ.
(ಆ ಇಡೀ ಕಾಡಿನ್ನೆಲ್ಲಾ ತಡಕಾಡಿದ ನಂತರದಲ್ಲಿಯೂ ತಂಡಕ್ಕೆ ಕೇವಲ ಎರಡು ಸಸ್ಯಗಳಷ್ಟೇ ಕಾಣಲು ಸಿಕ್ಕಿದ್ದೆಂಬ ಅಂಶವೊಂದೇ ಸಾಕು ಇದು ಅದೆಷ್ಟು ವಿರಳವೆಂಬ ಹಾಗೂ ಈಗಷ್ಟೇ ತನ್ನ ಅಸ್ತಿತ್ವ ಕಂಡುಕೊಳ್ಳುತ್ತಿರೋ ಸಸ್ಯವೆಂಬ ಅಂದಾಜಿಸಲು)

ಇದರ ಮತ್ತೊಂದು ವಿಶೇಷವೆಂದರೆ
ಇಡೀ ಜಗತ್ತಿನಲ್ಲಿ ನಮ್ಮ ಪಶ್ಚಿಮ ಘಟ್ಟದಲ್ಲಷ್ಟೇ ಈ ಹೂವನ್ನು ಕಾಣಬಹುದಾಗಿರೋದು.
ಹಾಗೂ ಇದೊಂದೇ ಇಡೀ ಗೂಗಲ್ಲಿನಲ್ಲಿ ಈ ಹೂವಿನ ಏಕೈಕ(ಸ್ಪಷ್ಟವಾಗಿರೋ)ಫೋಟೋ ಕಾಣೋಕೆ ಸಿಗೋದು. 😁

ಕಳೆದವಾರ ಮೂಡಿಗೆರೆಯ ಕಡೆ ಹೋಗಿದ್ದಾಗ ದೇವರಮನೆಯ ಕಾಲಭೈರವೇಶ್ವರ ದೇವಸ್ಥಾನದ ಹಿಂಬಾಗದಲ್ಲಿರೋ ಗುಡ್ಡದ ಮೇಲೆ ನಂಗೋಸ್ಕರ ಕಾದು ನಿಂತಿದ್ದಾಗ ಮೊಬೈಲಲ್ಲಿ ಸೆರೆ ಹಿಡ್ದಿದ್ದು. ♥

#SonerilaLateriticaFlower
#MintFamily
#Lamiaceae
#WesternGhatDiaries
#MobileClicks
#NewInvention

Friday, July 27, 2018

 ಹಿಮಾಲಯದ ಮಾಯಾಜಗತ್ತು
ಲಾಹುಲ್-ಸ್ಪಿತಿ ವ್ಯಾಲಿಯಲ್ಲೊಂದು ಸುತ್ತು.    
ಭಾಗ - ೧
ಹಿಮಾಚಲ ಪ್ರದೇಶದ ಉತ್ತರಕ್ಕೆ ಟಿಬೆಟ್ ಹಾಗೂ ಚೀನಾ ಗಡಿಗಳಿಗೆ ಅಂಟಿಕೊಂಡಂತಿರುವ,ಅತ್ಯಂತ ಹೆಚ್ಚು ಹಿಮ ಬೀಳುವ ಶೀತ ಮರುಭೂಮಿ ಪ್ರದೇಶವಾಗಿದ್ದರೂ ತನ್ನಲ್ಲಿರೋ ಲೆಕ್ಕವಿಲ್ಲದಷ್ಟು ಜಲಪಾತಗಳು,ಸರೋವರಗಳು,ಸಹಸ್ರ ವರ್ಷಗಳ ಇತಿಹಾಸವಿರೋ ಬೌದ್ಧ ದೇವಾಲಯಗಳು,ವಿಸ್ಮಯಕಾರಿ ಗುಹಾ ಸಮುಚ್ಛಯಗಳು,ವಿರಳ ಸಸ್ಯ ಪ್ರಾಣಿ ಪ್ರಬೇಧಗಳು,ಕುತೂಹಲಕಾರಿ ಹಳ್ಳಿಗಳು ಹಾಗೂ ನಯನ ಮನೋಹರ ಪ್ರಕೃತಿ ಸೌಂದರ್ಯದಿಂದಾಗಿ ಇನ್ನಿಲ್ಲದಂತೆ ದೇಶ ವಿದೇಶಗಳಿಂದ ಪ್ರವಾಸಿಗರನ್ನು ಸೆಳೆಯುತ್ತಾ,ಎಷ್ಟೇ ಕಣ್ತುಂಬಿಕೊಂಡರೂ ಮುಗಿಯದಷ್ಟು ಕೌತುಕಗಳನ್ನು ತನ್ನೊಡಲಲ್ಲಿ ಹೊತ್ತು ನಿಂತಿರುವ,ರಾಜಧಾನಿ ಶಿಮ್ಲಾದಿಂದ ಕೇವಲ ನೂರಾ ಅರವತ್ತು ಕಿಮೀ ದೂರದಲ್ಲಿರೋ ಅವಳಿ ಕಣಿವೆ ಪ್ರದೇಶವೇ ಲಾಹುಲ್-ಸ್ಪಿತೀ ವ್ಯಾಲಿ.

ಸಮುದ್ರ ಮಟ್ಟದಿಂದ ಸುಮಾರು ಹತ್ತು ಸಾವಿರದಿಂದ ಹದಿನೈದು ಸಾವಿರ ಅಡಿಗಳ ಎತ್ತರದ ವರೆಗೂ ಹಬ್ಬಿರುವ,ಕೇವಲ ಮೂವತ್ತೈದು ಸಾವಿರ ಜನಸಂಖ್ಯೆಯನ್ನು ಹೊಂದಿರುವ ಲಾಹುಲ್-ಸ್ಪಿತಿ ವ್ಯಾಲಿ‌ ಒಂದು ಕಾಲದಲ್ಲಿ ಸಮುದ್ರ ಪ್ರದೇಶವಾಗಿತ್ತು ಎಂದರೆ ನಂಬಲೇ ಬೇಕು.ಮಿಲಿಯನ್ ವರ್ಷಗಳ ಪ್ರಾಕೃತಿಕ ಸ್ಥಾನ ಪಲ್ಲಟಗಳಿಂದಾಗಿ ಸಾಗರವೊಂದು ಪರ್ವತ ಪ್ರದೇಶವಾಗಿ ಮಾರ್ಪಾಡು ಹೊಂದಿದ್ದರೂ,ಮೈಲುಗಟ್ಟಲೆ ಹರಡಿಕೊಂಡಿರೋ ಮರಳು ದಿಬ್ಬಗಳು ಹಾಗೂ ಅಲ್ಲಲ್ಲಿ ಕಂಡುಬರುವ ಸಮುದ್ರದಾಳದ ಪಳಿಯುಳಿಕೆಗಳು ಮೂಕಸಾಕ್ಷಿಗಳಾಗಿ ಉಳಿದುಕೊಂಡಿವೆ.

ಇಂತಹದ್ದೊಂದು ಅದ್ಭುತ ಪ್ರದೇಶವೊಂದರ,ಅಲ್ಲಿ ನೋಡಲೇಬೇಕಾದ ಕೆಲವೊಂದು ಪ್ರಮುಖ ಸ್ಥಳಗಳ ಬಗ್ಗೆ ಸಣ್ಣದೊಂದು ಪಕ್ಷಿನೋಟ.



*****ಟಾಬೂ*****
ಹಿಮಾಲಯದ ತಪ್ಪಲಲ್ಲೊಂದು ಅಜ್ಞಾತ ಅಜಂತಾ ಗುಹೆಗಳು.

ಮಹಾರಾಷ್ಟ್ರದ ಔರಂಗಾಬಾದಿನಲ್ಲಿರುವ ಜಗತ್ಪ್ರಸಿದ್ಧ ಅಜಂತಾ ಗುಹೆಗಳು ಎಲ್ಲರಿಗೂ ಚಿರಪರಿಚಿತ,ಆದರೆ ಬಹುತೇಕರಿಗೆ ಅಷ್ಟೇ ಏಕೆ ಲಾಹುಲ್-ಸ್ಪಿತೀ ವ್ಯಾಲಿಯ ಪ್ರವಾಸ ಕೈಗೊಳ್ಳುವವರಿಗೂ ಕೂಡಾ ತಿಳಿಯದ ವಿಚಾರವೇನೆಂದರೆ ಅದೇ ಕಾಲಘಟ್ಟದಲ್ಲಿ ನಿರ್ಮಾಣವಾಗಿದೆಯೆನ್ನಲಾಗುವ,ಶತಮಾನಗಳಿಂದ ಬೌದ್ಧ ಭಿಕ್ಷು ಗಳು ತಮ್ಮ ಧ್ಯಾನಕ್ಕಾಗಿ ಬಳಸಿಕೊಳ್ಳುತ್ತಿದ್ದ,ಈಗಲೂ ಬಳಸಿಕೊಳ್ಳುತ್ತಿರುವ ಮತ್ತೊಂದು ಗುಹಾ ಸಮುಚ್ಚಯ ಹಿಮಾಲಯದ ತಪ್ಪಲಲ್ಲೊಂದಿದೆ ಎಂಬುದು.


ಹಿಮಾಚಲ ಪ್ರದೇಶದ ಲಾಹುಲ್-ಸ್ಪಿತಿ ವ್ಯಾಲಿಯಲ್ಲಿರೋ ಕಾಜ಼ಾ ಪಟ್ಟಣದಿಂದ ರೇಕಾಂಗ್ ತಲುಪೋ ಹಾದಿಯಲ್ಲಿ 46ಕಿಮೀ ಸಾಗಿದರೆ ಎದುರಾಗೋ ಸ್ಪಿತಿ ನದಿಗೆ ಅಡ್ಡಲಾಗಿ ಹಾಕಲಾಗಿರೋ ಸೇತುವೆಯನ್ನು ದಾಟುತ್ತಿದ್ದಂತೆಯೇ ಸ್ವಾಗತಿಸುವ,ಸುತ್ತಲೂ ಆವರಿಸಿಕೊಂಡಿರುವ ಅಗಾಧವಾದ ಬೆಟ್ಟಗಳ ಪ್ರಾಕೃತಿಕ ರಕ್ಷಣಾ ಕೋಟೆಯ ನಡುವೆ ಸಮುದ್ರ ಮಟ್ಟದಿಂದ ಸರಿಸುಮಾರು ಹತ್ತು ಸಾವಿರ ಅಡಿಗಳ ಎತ್ತರದಲ್ಲಿ ಬೋಗುಣಿಯಾಕಾರದಲ್ಲಿರುವ ಪುಟ್ಟ ಹಳ್ಳಿ ಟಾಬೂ.ವಿಪರೀತ ಹಿಮಪಾತವಾಗುವ ಕಾರಣದಿಂದಾಗಿ ಇಡೀ ವ್ಯಾಲಿಯಲ್ಲಿಯೇ ಅತ್ಯಂತ ಶೀತಲ ವಾತಾವರಣ ಹೊಂದಿರೋ ಟಾಬೂ,ಕೇವಲ ನಾಲ್ಕು ತಿಂಗಳುಗಳ ಕಾಲವಷ್ಟೇ ಜಗತ್ತಿಗೆ ತೆರೆದುಕೊಳ್ಳುತ್ತದೆ.ಉಳಿದಂತೆ ಎಂಟು ತಿಂಗಳು ತನ್ನೆಲ್ಲಾ ರಸ್ತೆ ಸಂಪರ್ಕವನ್ನು ಕಡಿದುಕೊಂಡು ಸಂಪೂರ್ಣ ಹಿಮದ ಹೊದಿಕೆ ಹೊದ್ದು ಮಲಗಿ ಬಿಟ್ಟಿರುತ್ತದೆ ತನ್ನದೇ ಲೋಕದಲ್ಲಿ.

ಟಾಬು ಮಾನೆಸ್ಟರಿ.
ಕ್ರಿಸ್ತಶಕ 996 ರಲ್ಲಿ ಬೌದ್ಧರ ಮಹಾಗುರು,ಸಂಸ್ಕೃತದಲ್ಲಿದ್ದ ಅಷ್ಟೂ ಬೌದ್ಧ ಗ್ರಂಥಗಳನ್ನು ಟಿಬೆಟಿಯನ್ ಭಾಷೆಗೆ ಅನುವಾದಿಸಿದ ಮಹಾಜ್ಞಾನಿ ರಿಂಚೆನ್ ಝಾಂಪೋ ನಿರ್ಮಿಸಿದ,ಅತ್ಯಂತ ಪ್ರಾಚೀನ ಹಾಗೂ ಪವಿತ್ರವಾದ ಮಾನೆಸ್ಟೆರಿ ಎಂದು ಪರಿಗಣಿಸಲಾಗುವ ಟಾಬೂ ಮಾನೆಸ್ಟರಿಯು ಗೋಲ್ಡನ್ ಟೆಂಪಲ್,ಮಹಾಕಾಳ ವಜ್ರ ಭೈರವ,ಮೈತ್ರೇಯ,ವೈರೋಕಾ, ಬ್ರಹ್ಸೋಲಾ ಖಾಂಗ್ ಸೇರಿದಂತೆ ಒಟ್ಟು ಒಂಬತ್ತು ದೇವಸ್ಥಾನಗಳು ಹಾಗೂ 23 ಸ್ಥೂಪಗಳನ್ನು ಹೊಂದಿದ್ದು,ಇವಿಷ್ಟೇ ಅಲ್ಲದೆ ಭಿಕ್ಷುಗಳ ಪ್ರಾರ್ಥನಾ ಕೊಠಡಿ ಗಳು,ಸಭಾಗೃಹಗಳು,ವಸತಿ ಸಮುಚ್ಚಯ ಹಾಗೂ ಮಹಿಳಾ ಭಿಕ್ಷುಗಳಿಗಾಗಿ ಪ್ರತ್ಯೇಕ ವಾಸಗೃಹಗಳನ್ನು ಒಳಗೊಂಡಿದೆ.

ದೇವಸ್ಥಾನಗಳ ಗೋಡೆಯ ತುಂಬಾ ಬೋಧಿಸತ್ತ್ವದ ಚಿತ್ತಾರಗಳು ಹಾಗೂ ತಾರಾ ಮತ್ತು ಮೈತ್ರೇಯ ಬುದ್ಧನ ಉಬ್ಬು ಚಿತ್ರಗಳನ್ನು ಚಿತ್ರಿಸಲಾಗಿದ್ದು ಅಸೆಂಬ್ಲಿ ಹಾಲಿನಲ್ಲಿ ಆದಿ ಬುದ್ಧನ ಐವರು ಮಕ್ಕಳಲ್ಲೊಬ್ಬನಾದ ವೈರೋಕಾನನ ಯಶೋಗಾಥೆಗಳು ಸೇರಿದಂತೆ ಆತನ ಪ್ರತಿಮೆಯನ್ನೂ ರಚಿಸಲಾಗಿದೆ.ದೇವಸ್ಥಾನಗಳ ಒಳಬದಿಯ ಓಣಿ ಹಾದಿಯ ಇಕ್ಕೆಲಗಳ ತುಂಬೆಲ್ಲಾ ಬುದ್ಧನ ಪ್ರತಿಮೆಗಳು ಹಾಗೂ ಆತನ ಜೀವನ ಚರಿತ್ರೆಯ ಹಲವು ಮಜಲುಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಮಯವಾಗಿ ಚಿತ್ರಿಸಲಾಗಿದೆ.ಇವುಗಳ ವಿಶೇಷವೆಂದರೆ ಚಿತ್ರಿಸಿ ಸಾವಿರ ವರ್ಷಗಳಾದರೂ ಒಂಚೂರೂ ತನ್ನ ಬಣ್ಣ ಕಳೆದುಕೊಳ್ಳದಂತಿರೋದು.ಇವುಗಳು ಅಜಂತಾದ ಗುಹೆಗಳಲ್ಲಿನ ಚಿತ್ತಾರಗಳ ಯತಾವತ್ತು ರಚನೆಗಳಂತಿರೋದು ಹಾಗೂ ಅಲ್ಲಿನಂತೆಯೇ ಇಲ್ಲಿಯೂ ಬೌದ್ಧಭಿಕ್ಷುಗಳು ಧ್ಯಾನಸಾಧನೆಗಾಗಿ ಗುಹೆಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದರಿಂದಾಗಿ ಟಾಬೋವನ್ನು ಹಿಮಾಲಯದ ಅಜಂತಾ ಎಂದೇ ಕರೆಯಲಾಗುತ್ತದೆ.


1975ರ ಭೀಕರ ಭೂಕಂಪದ ನಂತರದಲ್ಲಿ ಕೆಲವೊಂದು ಕಟ್ಟಡಗಳು ನೆಲಸಮವಾಗಿ ಪುನರ್ನಿರ್ಮಾಣ ಮಾಡಲಾಯಿತಾದರೂ ಅಷ್ಟೂ ಸ್ಥೂಪಗಳು ಹಾಗೂ ದೇವಸ್ಥಾನಗಳು ವರ್ಷದ ಎಂಟು ತಿಂಗಳು ಸಂಪೂರ್ಣ ಹಿಮದಿಂದಾವೃತವಾಗಿಯೂ ಒಂದಿಂಚೂ ಹಾಳಾಗದೆ ಪ್ರಕೃತಿಯ ವಿಕೋಪಗಳಷ್ಟೇ ಅಲ್ಲದೆ ಹಲವು ಬಾರಿ ಆಂತರಿಕ ಒಳಜಗಳಗಳಿಂದಾಗಿ ಎದುರಾದ ದಾಳಿಗಳನ್ನೂ ದಿಟ್ಟವಾಗಿ ಎದುರಿಸುತ್ತಾ ಶತಮಾನಗಳಿಂದ ಸುಭದ್ರವಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿವೆ.



ಟಾಬೂ ಮಾನೆಸ್ಟರಿಯ ಕೆಲವು ವಿಶೇಷಗಳು.
ಸಾಮಾನ್ಯವಾಗಿ ಮಾನೆಸ್ಟರಿಗಳು ಪರ್ವತಗಳ ತುದಿಯಲ್ಲಿಯೇ ನಿರ್ಮಿಸಲಾಗುತ್ತದೆ ಆದರೆ ಇಲ್ಲಿ ಮಾತ್ರ ಅದಕ್ಕೆ ವ್ಯತಿರಿಕ್ತವಾಗಿ ತಪ್ಪಲಿನಲ್ಲಿ ನಿರ್ಮಿಸಲಾಗಿದೆ.
ಅಷ್ಟೂ ದೇವಸ್ಥಾನ ಹಾಗೂ ಸ್ತೂಪಗಳನ್ನು ಯಾವುದೇ ಕಲ್ಲುಗಳ ಸಹಾಯವಿಲ್ಲದೆ ಕೇವಲ ಮಣ್ಣಿನಿಂದಲೇ ನಿರ್ಮಿಸಲಾಗಿದೆ.
ಮಾನೆಸ್ಟರಿಯ ಸುತ್ತಲೂ ಬೃಹತ್ ತಡೆಗೋಡೆಯ ನಿರ್ಮಾಣವಾಗಿರೋದನ್ನು ಕೇವಲ ಇಲ್ಲಿ ಮಾತ್ರಾ ನೋಡಬಹುದು.
ಅತೀ ಪ್ರಾಚೀನ ಮನುಸ್ಕ್ರಿಪ್ಟ್ ಗಳು,ಥಂಕಾಗಳು ಹಾಗೂ ವಿಶೇಷ ತಂತ್ರಜ್ಞಾನ ಬಳಸಿ ರಚಿಸಲಾಗಿರೋ ಉಬ್ಬು ಚಿತ್ರಗಳನ್ನು ಇಲ್ಲಷ್ಟೇ ನೋಡಬಹುದಾಗಿದೆ.


ಟಾಬೂ ಗುಹೆಗಳು.
ಟಾಬೂ ಹಳ್ಳಿಯ ಸುತ್ತಲೂ ಆವರಿಸಿಕೊಂಡಿರುವ ಪರ್ವತ ಶ್ರೇಣಿಗಳ ತುಂಬೆಲ್ಲಾ,ಒಂದು ಕ್ಷಣ ಪ್ರಾಣಿಗಳು ತಮ್ಮ ವಾಸಕ್ಕಾಗಿ ಕೊರೆದಿರುವ ರಂಧ್ರಗಳಂತೆ ಭಾಸವಾಗೋ,ಒಳ ನುಸುಳುತ್ತಿದ್ದಂತೆಯೇ ಏಕಾಏಕಿ ಸಾವಿರಾರು ವರ್ಷಗಳ ಹಿಂದಿನ ಆದಿಮಾನವನ ಪ್ರಂಪಂಚದ ಒಳಹೊಕ್ಕಂತೆನಿಸಿ ಬೆರಗು ಮೂಡಿಸೋ ಗುಹೆಗಳ ಸಮುಚ್ಛಯವೇ ಟಾಬೂ ಗುಹೆಗಳು.


ಕೇವಲ ಹದಿನೈದು ನಿಮಿಷದ ಚಾರಣ ಮಾಡುತ್ತಿದ್ದಂತೆಯೇ ಎದುರಾಗೋ,ಕೇವಲ ಒಬ್ಬ ಮನುಷ್ಯ ಮಾತ್ರ ಒಳಹೋಗಬಹುದಾದ ಪುಟ್ಟ ಕಿಂಡಿಯಂತಹ ಗುಹೆಗಳು ಹೊರಗಿನಿಂದ ವಿಲಕ್ಷಣವೆನಿಸಿದರೂ ಒಳಗಿನಿಂದ ಅಷ್ಟೇ ಸುಸಜ್ಜಿತವಾಗಿವೆ.ಒಳ ಗೋಡೆಗಳೆಲ್ಲಾ ಗಿಲಾವು ಮಾಡಿದಂತಿದ್ದು ಪ್ರಾರಂಭದಲ್ಲಿ ಸಭಾ ಕೊಠಡಿ,ಧ್ಯಾನ ಮಂದಿರಗಳನ್ನು ಇರ್ಮಿಸಲಾಗಿದ್ದು ಒಳ ಭಾಗದಲ್ಲಿ ವಸತಿ ಕೋಣೆಗಳು ಸೇರಿದಂತೆ ಅಡುಗೆ ಗೆಂದೇ ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಲಾಗಿದೆ.

ಅಷ್ಟೇ ಅಲ್ಲದೆ ಬೆಂಕಿಯಿಂದೇಳುವ ಹೊಗೆ ಸರಾಗವಾಗಿ ಗುಹೆಯಿಂದ ಹೊರಹೋಗಲೆಂದು ಚಿಮಣಿಗಳಂತೆ ಕೊಳವೆಗಳನ್ನು ಕೂಡಾ ಕೊರೆಯಲಾಗಿದೆ.ಕೆಲವೊಂದು ಗುಹೆಗಳು ಈಗಿನ ಡುಪ್ಲೆಕ್ಸ್ ಮನೆಗಳಂತೆ ಮಹಡಿಗಳನ್ನು,ಹಲವಾರು ಪ್ರತ್ಯೇಕ ರೂಮುಗಳನ್ನು ಹೊಂದಿದ್ದು,ಸುಗಮವಾದ ಗಾಳಿ ಸಂಚಾರಕ್ಕೂ ಕೂಡಾ ವ್ಯವಸ್ಥೆಗಳನ್ನು ಹೊಂದಿವೆ.ಸಾವಿರಾರು ವರ್ಷಗಳ ಹಿಂದೆ ಹಿಮದಿಂದ ರಕ್ಷಿಸಿಕೊಳ್ಳಲು,ಚಳಿಗಾಲದ ಸಮಯದಲ್ಲಿ ತಮ್ಮ ಉಳಿದುಕೊಳ್ಳುವಿಕೆ ಹಾಗೂ ಧ್ಯಾನಗಳಿಗೆ ಬೌದ್ಧಭಿಕ್ಷುಗಳು ಬಳಸಿಕೊಳ್ಳುತ್ತಿದ್ದ ಮಾನವ ನಿರ್ಮಿತ ಗುಹೆಗಳಿವು.ಕಲ್ಲುಗಳ ಮೇಲೆಲ್ಲಾ ಮನುಷ್ಯ,ಜಿಂಕೆ,ದನ ಸೇರಿದಂತೆ ಆಯುಧಗಳ ಆಕೃತಿಗಳನ್ನು ಕೆತ್ತಲಾಗಿರುವುದನ್ನೂ ಕೂಡಾ ಕಾಣಬಹುದಾಗಿದ್ದು,ಇವು ಇಲ್ಲಿ ಕೇವಲ ಬೌದ್ಧ ಭಿಕ್ಷುಗಳಷ್ಟೇ ಅಲ್ಲ ಅವರಿಗೂ ಮುನ್ನ ಇಲ್ಲಿ ನಾಗರೀಕತೆಯೊಂದು ಬಾಳಿ ಬದುಕಿತ್ತು ಎಂಬುದಕ್ಕೆ ಸಾಕ್ಷಿಯಂತಿವೆ.

ಕೆಲವೊಂದು ಗುಹೆಗಳಿಗೆ ಬಾಗಿಲುಗಳನ್ನು ನಿರ್ಮಿಸಿ ಸಂರಕ್ಷಿಸಲಾಗಿದ್ದರೂ ಇನ್ನುಳಿದಂತೆ ಹಲವಾರು ಗುಹೆಗಳು ಯಾವುದೇ ಸೂಕ್ತ ರಕ್ಷಣಾ ಕ್ರಮಗಳಿಲ್ಲದೆ ವಿನಾಶದ ಅಂಚಿನಲ್ಲಿವೆ.ಪ್ರಸ್ತುತ ಈಗಲೂ ಕೂಡಾ ಭಿಕ್ಷುಗಳು ತಮ್ಮ ಧ್ಯಾನ ಸಾಧನೆಗಾಗಿ ಈ ಗುಹೆಗಳನ್ನೇ ಬಳಸಿಕೊಳ್ಳುತ್ತಿದ್ದು,ಗುಹೆಯ ಮೇಲ್ಭಾಗದಲ್ಲಿ ಧ್ವಜ ನೆಡಲಾಗಿದ್ದರೆ ಒಳಗೆ ಯಾರೋ ಧ್ಯಾನದಲ್ಲಿದ್ದಾರೆ ಒಳಗೆ ಪ್ರವೇಶಿಸುವಂತಿಲ್ಲ ಎಂದರ್ಥ.ಇದೊಂತರಾ ನಮ್ಮಲ್ಲಿನ Do not disturb ಬೋರ್ಡು ನೇತಾಕಿದಂತೆ.

ಉಳಿದುಕೊಳ್ಳಲು :-
ಹೋಟೆಲ್ ಗಳು ಹಾಗೂ ವಸತಿಗೃಹಗಳು ಬೆರಳೆಣಿಕೆಯಷ್ಟಿದ್ದರೂ ಅಂತಹ ಜನಜಂಗುಳಿಯಿರದ ಕಾರಣ ತಂಗಲು ಸಮಸ್ಯೆಯೇನೂ ಉಂಟಾಗುವುದಿಲ್ಲ ಅದೂ ಅಲ್ಲದೆ ಟಾಬೂ ಮಾನೆಸ್ಟರಿ ಹಾಗೂ ರಾಜ್ಯ ಸರ್ಕಾರದ ವತಿಯಿಂದ ನಡೆಸಲಾಗುವ ವಸತಿಗೃಹಗಳು ಲಭ್ಯವಿರೋ ಕಾರಣ ಅಲ್ಲಿಯು ಕೂಡಾ ಉಳಿದುಕೊಳ್ಳಬಹುದಾಗಿದೆ.

ಸಮೀಪದ ವಿಮಾನ ನಿಲ್ದಾಣ :- ಕುಲ್ಲು ಮನಾಲಿ ವಿಮಾನ ನಿಲ್ದಾಣ.
ಸಮೀಪದ ಬಸ್ ನಿಲ್ದಾಣ :- ಕಾಜ಼ಾ.

ವೀಕ್ಷಣೆಗೆ ಸೂಕ್ತ ಕಾಲ:-ಜೂನ್ ನಿಂದ ಸೆಪ್ಟೆಂಬರ್.

#Lahoul-Spiti Valley
#Tabo #Monastery
#TaboCaves #Ajanta-of-Himalaya

Saturday, July 14, 2018

                  *****ನುಬ್ರಾ ವ್ಯಾಲಿ*****
ಹಿಮಾಲಯದ ಒಡಲಲ್ಲೊಂದು ತಂಪು ಮರುಭೂಮಿ.
Hunder-Nubra valley Leh-Ladakh Cold desert.



ಮರುಭೂಮಿಯೆಂದರೆ ಸದಾ ಕುದಿಯುತ್ತಿರೋ ಸೂರ್ಯ,ಸುಡುವ ಬಿಸಿಲು,ಹನಿ ನೀರಿಗೂ ತಾತ್ವಾರವೆನಿಸೋ‌ ಬರಡು ಭೂಮಿ ಎಂಬೆಲ್ಲಾ ನಮ್ಮೊಳಗಿನ ನಂಬಿಕೆಯನ್ನೇ ಹುಸಿಯಾಗಿಸಿ ಬೆರಗುಗೊಳಿಸೋ ವಿಸ್ಮಯಲೋಕವೇ ಹಿಮಾಲಯದ ತಪ್ಪಲಿನಲ್ಲಿರುವ‌ ಕೊರೆವ ಛಳಿಯ ನಡುವಿನ ತಣ್ಣನೆಯ ಮರಳುಗಾಡು ನುಬ್ರಾ ವ್ಯಾಲಿ.


ಲೇಹ್ ಲಡಾಖ್ ಪ್ರಾಂತ್ಯದ ಉತ್ತರಕ್ಕೆ ಭಾರತ ಪಾಕಿಸ್ತಾನ ಹಾಗೂ ಚೀನಾ ದೇಶಗಳ ನಡುವೆ ಗಡಿರೇಖೆಯಂತಿರೋ,ಜಗತ್ತಿನಲ್ಲಿಯೇ ಎರಡನೇ ಎತ್ತರವಾದ,ಧ್ರುವಪ್ರದೇಶಗಳನ್ನು ಹೊರತು ಪಡಿಸಿದರೆ ಅತ್ಯಂತ ಹೆಚ್ಚು ಹಿಮದಿಂದಾವೃತವಾಗಿರೋ ಪ್ರದೇಶವೆಂಬ ಖ್ಯಾತಿಯ‌ ಕಾರಾಕೋರಂ ಪರ್ವತಶ್ರೇಣಿಗಳಲ್ಲಿನ ಸಿಯಾಚಿನ್ ಗ್ಲೇಶಿಯರ್ ನಿಂದ ಕೇವಲ ಮೂವತ್ತು ಕಿಮೀ ಅಂತರದಲ್ಲಿದ್ದೂ ಈ ವ್ಯಾಲಿ ಸಂಪೂರ್ಣ ಮರಳಿನ ದಿಬ್ಬಗಳಿಂದಾವೃತವಾದ ಮರುಭೂಮಿಯಂತಾಗಿರೋದು ಪ್ರಕೃತಿಯ ನಿಗೂಢತೆಗೊಂದು ನಿದರ್ಶನ.

ಲೇಹ್ ನಿಂದ ಖರ್ದೂಂಗ್-ಲಾ ಪಾಸ್ ಮುಖಾಂತರ ಡಿಸ್ಕಿತ್ ಮಾರ್ಗವಾಗಿ 150 ಕಿಮೀ ಸಾಗಿದಲ್ಲಿ ಕಾಣಸಿಗೋ ನುಬ್ರಾ ವ್ಯಾಲಿಯ ಪ್ರಮುಖ ಆಕರ್ಷಣೆಯೇ ಹಿಮದ ತದ್ರೂಪಿನಂತೆ ಕಂಗೊಳಿಸೋ ಹುಂಡರ್ ಮರಳು ದಿಬ್ಬಗಳು ಹಾಗೂ ಇಡೀ ಭಾರತದಲ್ಲಿ ಇಲ್ಲಿ ಮಾತ್ರ ಕಾಣಸಿಗುವ ಎರಡು ಡುಬ್ಬಗಳ ಬ್ಯಾಕ್ಟ್ರಿಯನ್ ಒಂಟೆಗಳು.ಇದಲ್ಲದೆ ಖಾರ್ದೂಂಗ್-ಲಾ ಪಾಸ್ ಸೇರಿದಂತೆ ಸುಮುರ್,ಡಿಸ್ಕಿತ್,ಪನಾಮಿಕ್,ಕೈಗರ್ ಹಳ್ಳಿಗಳು ಕೂಡಾ ತಮ್ಮದೇ ಆದ ವೈಶಿಷ್ಟ್ಯಗಳನ್ನು ಹೊಂದಿದ್ದು,ಇವೂ ಕೂಡಾ ಪ್ರೇಕ್ಷಣೀಯ ಸ್ಥಳಗಳಾಗಿವೆ.


ಈ ನುಬ್ರಾ ವ್ಯಾಲಿಯ ಮತ್ತೊಂದು ವಿಶೇಷವೆಂದರೆ,
ಅತೀ ಪ್ರಾಚೀನ ಅಂತರ ರಾಷ್ಟ್ರೀಯ ವಾಣಿಜ್ಯ ಮಾರ್ಗವಾದ “ಸಿಲ್ಕ್ ರೂಟ್” ಎಂದು ಕರೆಯಲ್ಪಡುವ ರಸ್ತೆ ಮಾರ್ಗವಿದು. ಅಂದ್ರೆ ಓಲ್ಡೆಸ್ಟ್ ಇಂಟರ್ನ್ಯಾಶನಲ್ ಹೈವೇ ಅನ್ನಬಹುದು.ಹಿಂದೆ ಸಾಂಬಾರ ಪದಾರ್ಥಗಳನ್ನೂ ಸೇರಿದಂತೆ ಇನ್ನಿತರ ವಸ್ತುಗಳಿಗಾಗಿ ಐರೋಪ್ಯ ದೇಶಗಳಿಂದ ವ್ಯಾಪಾರಿಗಳು ಭಾರತವನ್ನು ತಲುಪಲು ಬಳಸುತ್ತಿದ್ದದ್ದು ಇದೇ ರಸ್ತೆ ಮಾರ್ಗವನ್ನು.
ಭಾರತದಿಂದ ಚೀನಾ ದೇಶಕ್ಕೆ ಅಥವಾ ಅಲ್ಲಿಂದ ಇಲ್ಲಿಗೆ ಹಿಂದೆಲ್ಲಾ ಇದೇ ಮಾರ್ಗವಾಗಿ ನಡೆದುಕೊಂಡೇ ಹೋಗಲಾಗುತ್ತಿತ್ತು.ಗಡಿ ವಿವಾದ ಉಲ್ಬಣಗೊಂಡ ನಂತರದಲ್ಲಿ ಮುಚ್ಚಲಾಗಿದೆಯಷ್ಟೇ....


ಮರಳಿನ ದಿಬ್ಬಗಳ ಮೇಲಿನ ಜಾರುಬಂಡಿಯಾಟ,ಎರಡು ಡುಬ್ಬದ ಒಂಟೆಯ ಮೇಲಿನ‌ ಡೆಸರ್ಟ್ ಸಫಾರಿ,ಮರುಭೂಮಿಯ ನಡುವಲ್ಲಿರೋ ಓಯಸಿಸ್ ನಂತೆ ಕಂಡುಬರೋ ಹಸಿರು ಪ್ರದೇಶದ ನಡುವೆ ತೊರೆಗಳಂತೆ ಹರಿಯೋ ಶಿಯೋಕ್ ಹಾಗೂ ಸಿಯಾಚಿನ್ ನದಿಗಳ ಸಂಗಮ,ಅವುಗಳಿಗೆ ಅಡ್ಡಲಾಗಿ ಹಾಕಲಾಗಿರೋ ಪುಟ್ಟ ಮರದ ಸೇತುವೆಗಳು,ಹಿಮದಿಂದಾವೃತವಾದ ಪರ್ವತದಂಚುಗಳು ಬಂಗಾರದ ಲೇಪನವಾದಂತೆ ಕೆಂಬಣ್ಣಕ್ಕೆ ತಿರುಗೋ ಸೂರ್ಯೋದಯ ಸೂರ್ಯಾಸ್ತಗಳು ಹೊಸದೊಂದು ಜಗತ್ತಿಗೇ ಕೊಂಡೊಯ್ದುಬಿಡುತ್ತವೆ.


ಡಿಸ್ಕಿತ್ (Diskit) .
ನುಬ್ರಾವ್ಯಾಲಿಯ ಕೇಂದ್ರಸ್ಥಾನ ಹಾಗೂ ಸಿಯಾಚಿನ್ ಸೆಕ್ಟರಿನ ಮಿಲಿಟರಿಗಳ ಬೇಸ್ ಕ್ಯಾಂಪ್ ಕೂಡಾ ಆಗಿರೋ ಈ ಪುಟ್ಟ ಗ್ರಾಮದ ಪ್ರಮುಖ ಆಕರ್ಷಣೆ ಲಾಚುಂಗ್ ದೇವಸ್ಥಾನ ಹಾಗೂ 14 ನೇ ಶತಮಾನದ ಡಿಸ್ಕಿತ್ ಮಾನೆಸ್ಟರಿಯಲ್ಲಿ ಸ್ಥಾಪಿಸಲಾಗಿರುವ 106 ಅಡಿಗಳ ಎತ್ತರದ ಮೈತ್ರೇಯ ಬುದ್ಧನ ಮೂರ್ತಿ.ಬಂಗಾರದ ಲೇಪನವಾಗಿರೋ ಈ ಮೂರ್ತಿಯನ್ನು ಪಾಕಿಸ್ತಾನಕ್ಕೆ ಮುಖ ಮಾಡಿದಂತೆ ಕೂರಿಸಲಾಗಿರೋದು ವಿಶೇಷ.ಇಲ್ಲಿ ಪ್ರತೀವರ್ಷ ಫೆಬ್ರವರಿಯಲ್ಲಿ ಡೋಮೋಚೇ(Festival of the Scape goat) ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಖಾರ್ದೂಂಗ್-ಲಾ ಪಾಸ್. Khardung-La Pass
ಸಮುದ್ರ ಮಟ್ಟದಿಂದ 18379 ಅಡಿಗಳ ಎತ್ತರದಲ್ಲಿದ್ದು,ಜಗತ್ತಿನಲ್ಲಿಯೇ ಅತ್ಯಂತ ಎತ್ತರದಲ್ಲಿ ವಾಹನ ಚಲಾಯಿಸಬಹುದಾದ ರಸ್ತೆ ಎಂಬ ಖ್ಯಾತಿಯನ್ನೂ ಹೊಂದಿದೆ.ಅತ್ಯಂತ ದುರ್ಗಮ ಹಾಗೂ ತೀರಾ ವಿರಳ ಆಮ್ಲಜನಕದ ಲಭ್ಯತೆಯಿರೋ ಈ ಜಾಗದಲ್ಲಿ ವರ್ಷವಿಡೀ ಹಿಮ ಕಾಣಸಿಗುತ್ತದೆ.ಅತೀ ಪ್ರಾಚೀನ ವಾಣಿಜ್ಯ ಮಾರ್ಗವಾದ ಸಿಲ್ಕ್ ರೂಟ್ ನ ಪ್ರಮುಖ ಅಂಗವಿದಾಗಿದ್ದು,ಸಿಯಾಚಿನ್ ಸೆಕ್ಟಾರಿಗೆ ಸಂಪರ್ಕ ಕಲ್ಪಿಸೋ ಏಕೈಕ ರಸ್ತೆ ಮಾರ್ಗ ಇದಾಗಿದೆ.

ಪನಾಮಿಕ್.
ಟೈಗರ್ ವಿಲೇಜ್ ಎಂದೇ ಖ್ಯಾತಿಯ ಈ ಪುಟ್ಟ ಹಳ್ಳಿಯಲ್ಲಿನ ಮೈ ಕೊರೆವ ಛಳಿಯ ನಡುವಲ್ಲೂ ಮುಗಿಲೆತ್ತರಕ್ಕೆ ಚಿಮ್ಮುವ ಬಿಸಿನೀರ ಬುಗ್ಗೆಗಳು ಹಾಗೂ ಸ್ಥಳೀಯರು ಅತ್ಯಂತ ಪವಿತ್ರವೆಂದು ಪೂಜಿಸುವ ಯಾರಬ್ ಸರೋವರ ಪ್ರಮುಖ ಆಕರ್ಷಣೆ.ಹಿಮನದಿಯ ತಟದಲ್ಲಿ ಎಲ್ಲೆಂದರಲ್ಲಿ ನೆಲದಿಂದೆದ್ದು ಬರುವ ಬುಗ್ಗೆಗಳ ನಡುವಲ್ಲಿ ಕುಳಿತು ರಿಲ್ಯಾಕ್ಸ್ ಆಗಬಹುದು ನದಿಯ ನೀರಿನ ಹರಿವು ಹೆಚ್ಚಿರಬೇಕಷ್ಟೇ.ಇಲ್ಲದಿದ್ದಲ್ಲಿ ವಿಪರೀತ ಬಿಸಿ.

ಇತರ ಪ್ರೇಕ್ಷಣೀಯ ಸ್ಥಳಗಳು.
ಸುಮುರ್ ನಲ್ಲಿರೋ ಸಾನ್ಸಲಿಂಗ್ ಮಾನೆಸ್ಟರಿ,2010 ರ ವರೆಗೂ ಹೊರಗಿನವರಿಗೆ ಪ್ರವೇಶಕ್ಕೆ ನಿರ್ಬಂಧ ವಿದ್ದ ಟುರ್ಟುಕ್ ವಿಲೇಜ್,ಚಂಬಾ ಮಾನೆಸ್ಟರಿ,ಸಿಯಾಚಿನ್ ಬೇಸ್ ಕ್ಯಾಂಪ್.

ವಸತಿ ವ್ಯವಸ್ಥೆ :-
ತಂಗಲು ಡಿಸ್ಕಿತ್ ಹಾಗೂ ಹುಂಡರ್ ನಲ್ಲಿ ಸಾಕಷ್ಟು ಸಂಖ್ಯೆಯ ಹೋಮ್ ಸ್ಟೇ ಹಾಗೂ ಹೋಟೆಲ್ ಗಳು ಲಭ್ಯವಿದೆ.
ಕೇವಲ ಒಂದು ಪೆಟ್ರೋಲ್ ಬಂಕ್ ಮಾತ್ರ ಡಿಸ್ಕಿತ್ ನಲ್ಲಿದ್ದು ನಿಮ್ಮದೇ ವಾಹನದಲ್ಲಿ ಹೊರಟಲ್ಲಿ ಲೇಹ್ ನಲ್ಲಿಯೇ ಇಂಧನ ತುಂಬಿಸಿಕೊಳ್ಳೋದು ಉತ್ತಮ.
ಲೇಹ್ ಹೊರತು ಪಡಿಸಿ ಮತ್ತೆಲ್ಲೂ ATM ಗಳು ಲಭ್ಯವಿಲ್ಲದ ಕಾರಣ ಸಾಕಷ್ಟು ಹಣದೊಂದಿಗೇ ಹೊರಡೋದು ಸೂಕ್ತ.

ಸಮೀಪದ ವಿಮಾನ‌ನಿಲ್ದಾಣ :-ಲೇಹ್.
ಯಾವುದೇ ರೈಲ್ವೆ ಸಂಪರ್ಕ ಇಲ್ಲದ ಕಾರಣ ವಿಮಾನ ಮಾರ್ಗ ಹೊರತು ಪಡಿಸಿ ಕೇವಲ ರಸ್ತೆ ಮಾರ್ಗವಾಗಿ ಹೊರ ರಾಜ್ಯಗಳಿಂದ ಲೇಹ್ ತಲುಪಬಹುದಾಗಿದೆ.

ವೀಕ್ಷಣೆಗೆ ಸೂಕ್ತ ಕಾಲ.
ಏಪ್ರಿಲ್ ನಿಂದ ನವಂಬರ್‌ ವರೆಗಷ್ಟೇ ಹೊರ ರಾಜ್ಯಗಳಿಂದ ಲೇಹ್ ಗೆ ರಸ್ತೆಮಾರ್ಗವಾಗಿ ಸಂಪರ್ಕ ಸಾಧ್ಯವಿರೋ ಕಾರಣ ಆ ಸಮಯದಲ್ಲಷ್ಟೇ ಸಂದರ್ಶಿಸೋದು ಸೂಕ್ತ.

Nubra Valley
Hunder sand Dunes
Diskith Leh-Ladakh
Khardung-La pass Panamik Turtuk Sumur Zimkhang Gompa Yarab-Tso Lake
Samstaling Monastery Khalsar Kyagar village Siachin
Long Drive Himalayan Diaries





Saturday, July 7, 2018

         *****ಗಂಡಿಕೋಟ (Gandikota)*****
ಪ್ರಕೃತಿ ವೈಚಿತ್ರ್ಯಗಳ ಕೌತುಕ...ಭಾರತದ ಮಹಾಕಂದಕ.
( The grand canyon of India )


ಕಣಿವೆಯ ಮೇಲ್ಬಾಗದಲ್ಲಿ ನಿಂತು ಪ್ರಪಾತದಾಳಕ್ಕೊಂದು ಕಲ್ಲೆಸೆದರೆ ತಳ ಸೇರೋದು ಬಿಟ್ಟು,ಅರ್ಧ ದಾರಿ ಕ್ರಮಿಸುತ್ತಿದ್ದಂತೆಯೇ ಪುನಃ ಮೇಲ್ಮುಖವಾಗಿ ಚಲಿಸಲು ಮೊದಲಾಗೋದನ್ನೆಲ್ಲಿಯಾದರೂ ಕಂಡಿದ್ದೀರಾ?ನಂಬಲಸಾಧ್ಯಾದರೂ ಇಂತಹದ್ದೊಂದು ವೈಚಿತ್ರ್ಯವಿರೋದು ಆಂದ್ರಪ್ರದೇಶದ ಕಡಪ ಜಿಲ್ಲೆಗೆ ಸೇರಿದ ಜಮ್ಮಲಮಡುಗು ಎಂಬ ಊರಿನಿಂದ ಹದಿನೈದು ಕಿಮೀ ದೂರದಲ್ಲಿರೋ ಗಂಡಿಕೋಟ ಎಂಬ ಗ್ರಾಮದಲ್ಲಿ.

ಮೂರು ಕಡೆ ಪ್ರಕೃತಿ ಇರ್ಮಿತ ನೂರಾರು ಅಡಿಗಳ ಕಂದಕದ ತಡೆಗೋಡೆ,ಅದರ ಆಳದಲ್ಲಿ ರಭಸವಾಗಿ ಹರಿಯುತ್ತಿರೋ ನದಿ,ಮತ್ತೊಂದೆಡೆ ಸುಮಾರು ಹತ್ತಿಪ್ಪತ್ತು ಕಿಮೀ ಉದ್ದಗಲಕ್ಕೂ ಮೈ ಚಾಚಿಕೊಂಡಿರೋ ಕಲ್ಲುಬಂಡೆಗಳು ಹಾಗೂ ಕುರುಚಲು ಗಿಡಗಳಿಂದಾವೃತವಾದ ಬಯಲು ಪ್ರದೇಶ.ಇಂತಹದ್ದೊಂದು ಅದ್ಭುತ ರಕ್ಷಣಾ ವ್ಯವಸ್ಥೆಯ ನಡುವಲ್ಲಿರೋ ಎರ್ರಿಮಲೈ ಪರ್ವತದ ಮೇಲೆ ತಮ್ಮದೊಂದು ಸಾಮ್ರಾಜ್ಯ ಸ್ಥಾಪಿಸಿಕೊಂಡು 300ವರ್ಷಗಳಿಗೂ ಅಧಿಕ ಕಾಲ ಆಳ್ವಿಕೆ ನಡೆಸಿದ್ದು ವಿಜಯನಗರದ ಅರಸರ ಸಾಮಂತರೂ,ಸೇನೆಯ ಪ್ರಬಲ ಶಕ್ತಿಯೂ ಆಗಿದ್ದ ಪೆಮ್ಮಸಾನಿಗಳು.

ಈ ವಂಶದ ರಾಜರುಗಳಲ್ಲಿ ಪ್ರಮುಖನಾದ ಕುಮಾರ ತಿಮ್ಮಾನಾಯಕನ ಕಾಲದಲ್ಲಿ ನಿರ್ಮಾಣವಾಯಿತೆನ್ನಲಾಗುವ ಬಲಾಢ್ಯ ಕೋಟೆಯೇ ಗಿರಿದುರ್ಗ,ಜಲದುರ್ಗ,ಕಮರಿದುರ್ಗ ಎಂದೆಲ್ಲಾ ಪ್ರಖ್ಯಾತವಾಗಿರೋ,ಮೀರ್ ಜುಮ್ಲಾ ನಿಂದ ದಾಳಿಗೀಡಾಗಿ ಲೂಟಿಗೊಂಡು ಮತ್ತೊಂದು ಹಂಪಿಯಂತೆ ಕಂಡುಬರೋ ಗ್ರಾಂಡ್ ಕ್ಯಾನಿಯನ್ ಆಫ್ ಇಂಡಿಯಾ ಎಂಬ ಖ್ಯಾತಿಯ ಗಂಡಿಕೋಟ.

ಸುಮಾರು ಎಂಟು ಕಿಮೀ ಸುತ್ತಳತೆಯಲ್ಲಿ ನಲವತ್ತು ಅಡಿ ಎತ್ತರ ಹತ್ತು ಅಡಿ ದಪ್ಪದ ಬಲಿಷ್ಠವಾದ ರಕ್ಷಣಾ ಗೋಡೆ,ಅದರ ಮೇಲ್ಭಾಗದಲ್ಲಿರೋ ನಲವತ್ತಕ್ಕೂ ಅಧಿಕ ರಕ್ಷಣಾ ಗೋಪುರಗಳು,ಮಾಧವ ಹಾಗೂ ರಂಗನಾಥ ದೇವಸ್ಥಾನಗಳು,ಮದ್ದುಗುಂಡು ಸಂಗ್ರಹಾಗಾರ,ಉಗ್ರಾಣಗಳು,ರಾಣಿ ಮಹಲ್,ಬಂಧೀಖಾನೆ,ಪುಷ್ಕರಣಿಗಳು,ಚಾರ್ ಮಿನಾರ್,ಜುಮ್ಲಾ ಮಸೀದಿ ಇಲ್ಲಿನ ಪ್ರಮುಖ ಆಕರ್ಷಣೆಯಾದರೆ,ಇವೆಲ್ಲವುಗಳನ್ನೂ ಮೀರಿಸುವಂತೆ ಜನರನ್ನು ಆಕರ್ಷಿಸುತ್ತಿರೋದು ಮಾತ್ರ ಕೋಟೆಗೆ ಕಾವಲುಗೋಡೆಯಂತೆ ಮೂರು ಭಾಗ ಆವರಿಸಿಕೊಂಡಿರುವ ಪೆನ್ನಾ ನದಿಯಿಂದಾಗಿ ಉಂಟಾಗಿರೋ ಮುನ್ನೂರು ಅಡಿ ಅಗಲ ಹಾಗೂ ಕಿಲೋಮೀಟರುಗಟ್ಟಲೆ ಉದ್ದಕ್ಕೆ ಮಲಗಿರೋ ಆನಕೊಂಡಾ ಹಾವಿನಂತಿರೋ ಕಣಿವೆಯ ವಿಹಂಗಮ ದೃಶ್ಯಾವಳಿಗಳು.

ಇತಿಹಾಸ :-
ಕ್ರಿಸ್ತಶಕ 1123 ರಲ್ಲಿ ಕಲ್ಯಾಣದ ಚಾಲುಕ್ಯರ ಸಾಮಂತ ರಾಜನಾಗಿದ್ದ ಕಾಕರಾಜ ಎಂಬಾತ ತನ್ನ ಪುಟ್ಟದೊಂದು ರಾಜ್ಯವೊಂದನ್ನು ಕಟ್ಟಿಕೊಂಡು ಸಣ್ಣದಾಗಿ ಕೋಟೆ ನಿರ್ಮಿಸಿದ್ದ.ನಂತರದಲ್ಲಿ ವಿಜಯನಗರದ ರಾಜರ ಸಾಮಂತರಲ್ಲಿ ಪ್ರಮುಖರಾಗಿದ್ದ ಪೆಮ್ಮಸಾನಿಗಳು ತಮ್ಮ ಸುಪರ್ದಿಗೆ ತೆಗೆದುಕೊಂಡಮೇಲೆ ದೃಶ್ಯವೇ ಬದಲಾಗಿ ಹೋಯ್ತು.ಪೆಮ್ಮಸಾನಿ ವಂಶದಲ್ಲಿ ಪ್ರಮುಖನಾಗಿದ್ದ ಕುಮಾರ ತಿಮ್ಮಾನಾಯಕನ ಆಳ್ವಿಕೆಯ ಕಾಲದಲ್ಲಂತೂ ಉತ್ತುಂಗದಲ್ಲಿತ್ತು.ಈತನ ನಂತರದಲ್ಲಿ ಬಂದಂತಹ ರಾಮಲಿಂಗ ನೃಪಾಲುಡು,ಪೆದ್ದ ತಿಮ್ಮಾನಾಯಕ,ಅರ ತಿಮ್ಮಾನಾಯಕರಾದಿಯಾಗಿ ಇನ್ನಿತರ ರಾಜರುಗಳೂ ನಾಡನ್ನು ಕಟ್ಟಿ ಬೆಳೆಸುವಲ್ಲಿ ಶ್ರಮವಹಿಸಿದ್ದಾರೆ.
ಹೀಗೆ ಸಮೃದ್ಧವಾಗಿದ್ದ ನಾಡೊಂದು ಮೀರ್ ಜುಮ್ಲಾ ಎಂಬಾತನ ಆಕ್ರಮಣದ ನಂತರದಲ್ಲಿ ಚಿತ್ರಣವೇ ಬದಲಾಗಿ ಹಾಳು ಹಂಪಿಯಂತಾಗಿದ್ದು ಮಾತ್ರ ವಿಪರ್ಯಾಸ.
ತನ್ನ ತೆಕ್ಕೆಗೆ ತೆಗೆದುಕೊಂಡ ಮೀರ್ ಜುಮ್ಲಾ ಮಸೀದಿ,ಚಾರ್ ಮಿನಾರ್ ಇತ್ಯಾದಿಗಳನ್ನು ನಿರ್ಮಿಸಿದ್ದಲ್ಲದೆ,ಇಲ್ಲಿದ್ದ ದೇವಾಲಯಗಳ ವಿಗ್ರಹಗಳನ್ನೆಲ್ಲಾ ನದಿಗೆಸೆದು,ಶಿಲ್ಪಕಲೆಗಳನ್ನೆಲ್ಲಾ ಧ್ವಂಸ ಮಾಡಿ, ಮೂಲನಿವಾಸಿಗಳನ್ನು ಇನ್ನಿಲ್ಲದಂತೆ ಚಿತ್ರಹಿಂಸೆಗೊಳಪಡಿಸಿ ತನ್ನ ವಿಕೃತಿಯನ್ನು ಮೆರೆಯಲಾರಂಭಿಸಿದ.
ಈಗ ಅಲ್ಲಿರೋ ರಂಗನಾಥ,ಮಾಧವರಾಯ ದೇವಸ್ಥಾನಗಳೆರಡರಲ್ಲೂ ಇಂದಿಗೂ ಪೂಜೆ ನಡೆಯೋದಿಲ್ಲ ಕಾರಣ ಅಲ್ಲಿ ಪೂಜಿಸಲು ವಿಗ್ರಹವೇ ಇಲ್ಲ.





ಮುಗಿಲೆತ್ತರಕ್ಕೆ ಚಾಚಿದಂತಿರೋ ಬಂಡೆಗಳ ತುದಿಯನ್ನೇರಿ ಕುಳಿತು ಸೂರ್ಯೋದಯ ಹಾಗೂ ಸೂರ್ಯಾಸ್ತಗಳೆರಡರ ದೃಶ್ಯ ವೈಭವವನ್ನು ಸವಿಯಬಹುದಾಗಿದ್ದು,ಚಾರಣ ಮಾಡ ಬಯಸುವವರು ಎರಡು ಕಿಮೀ ಆಳದಲ್ಲಿರೋ ನದಿ ಪಾತ್ರದ ವರೆಗೊಂದು ಚಾರಣವೂ ಕೈಗೊಳ್ಳಬಹುದಾಗಿದೆ.ಇದಿಷ್ಟೇ ಅಲ್ಲದೆ ಆಂಧ್ರಪ್ರದೇಶದ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ರಾಕ್ ಕ್ಲೈಂಬಿಂಗ್,ರ್ಯಾಪಲ್ಲಿಂಗ್,ಕಯಾಕಿಂಗ್,ಬೋಟಿಂಗ್ ಸೌಲಭ್ಯವೂ ಇದ್ದು,ಇತ್ತೀಚೆಗೆ ಜಲಾಶಯದ ನಡುವಲ್ಲಿರೋ ದ್ವೀಪದಲ್ಲಿಯೂ ರೆಸಾರ್ಟ್ ನಿರ್ಮಾಣವಾಗಿದ್ದು ಅಲ್ಲಿಗೂ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಪೆನ್ನಾ ನದಿಯ ಮತ್ತೊಂದು ವಿಶೇಷವೆಂದರೆ,
ಈ ನದಿಯ ಉಗಮಸ್ಥಾನವಿರೋದು ನಮ್ಮ ಕರ್ನಾಟಕದ ಚಿಕ್ಕಬಳ್ಳಾಪುರದ ಬಳಿಯ ನಂದಿ ಬೆಟ್ಟದಲ್ಲಿ.

ಬೇಲಂ ಗುಹೆಗಳು.(Belam,Belum Caves )
ದೇಶದಲ್ಲಿಯೇ ಅತ್ಯಂತ ಉದ್ದ ಹಾಗೂ ದೊಡ್ಡದಾದ ನೈಸರ್ಗಿಕ ಗುಹೆಯೆಂಬ ಖ್ಯಾತಿಯ,ಮಿಲಿಯನ್ ವರ್ಷಗಳ ಹಿಂದೆ ರಾಸಾಯನಿಕ ಪ್ರಕ್ರಿಯೆಗಳಿಂದಾಗಿ ರಚನೆಗೊಂಡಿರೋ ಬೇಲಂ ಗುಹೆ ಜಮ್ಮಲಮಡುಗುವಿನಿಂದ ಕೇವಲ 46 km ದೂರದಲ್ಲಿದೆ.ಸುಣ್ಣದ ಕಲ್ಲುಗಳಿಂದ ನಿರ್ಮಾಣವಾಗಿರೋ ಈ ಗುಹೆ ಭೂಮಟ್ಟದಿಂದ ನೂರೈವತ್ತು ಅಡಿ ಆಳದಲ್ಲಿದ್ದು,ಇಲ್ಲಿಯವರೆಗೂ 3.5 ಕಿಮೀ ವರೆಗೂ ಅನ್ವೇಷಿಸಲಾಗಿದ್ದು ಇದರಲ್ಲಿ ಕೇವಲ 1.5 ಕಿಮೀ ನಷ್ಟು ಮಾತ್ರ ಸಾರ್ವಜನಿಕ ವೀಕ್ಷಣೆಗೆ ತೆರೆದಿಡಲಾಗಿದೆ.

ಸಾಗುತ್ತಾ ಹೋದಂತೆ ಹೊಸದೊಂದು ಜಗತ್ತಿನೊಳಗೆ ಪ್ರವೇಶಿಸುವಂತೆ ಭಾಸವಾಗುವ,ಸುತ್ತಲೂ ಕಂಡುಬರೋ ಚಿತ್ರವಿಚಿತ್ರ ರಚನೆಗಳು,ಕೆಲವೊಂದು ಕಡೆ ನೇರವಾಗಿ ನಡೆಯಲೂ ಆಗದಂತಹ ಕೊಳವೆ ಮಾರ್ಗಗಳ ಹಾದಿಯನ್ನು ಮತ್ತಷ್ಟು ರೋಚಕಗೊಳಿಸುತ್ತವೆ.ಹೀಗಿದ್ದೂ ಸಾಕಷ್ಟು ಬೆಳಕಿನ ಹಾಗೂ ಇಂಗಾಲ ಹೀರಿಕೊಳ್ಳುವ ಕೊಳವೆಗಳನ್ನು ಅಳವಡಿಸಲಾಗಿರೋ ಕಾರಣದಿಂದಾಗಿ ಸಮಸ್ಯೆಯೇನೂ ಉಂಟಾಗುವುದಿಲ್ಲ.
ಸಾಗುವ ಹಾದಿಯಲ್ಲಿ ವೀಕ್ಷಣೆಗೆ ಅನುಕೂಲವಾಗುವಂತೆ ಒಂಬತ್ತು ವಿಭಾಗಗಳಾಗಿ ವಿಂಗಡಿಸಲಾಗಿದ್ದು ಅತೀ ಚಿಕ್ಕ ಹಾದಿಯಲ್ಲಿ ಅಗೋ ಸಿಂಹದ್ವಾರ,ಛಲಪತಿ ರೆಡ್ಡಿ ಹಾಲ್,ಗಧೆ,ಆನೆಯ ಕಾಲುಗಳ ರಚನೆಯಂತಿರೋ ರಾಮರೆಡ್ಡಿ ಮಂಟಪ,ಶಿಲಿಂಗಗಳನ್ನು ತಲೆ ಕೆಳಗಾಗಿ ಇಳಿ ಬಿಟ್ಟಂತಿರುವ ರಚನೆಗಳಿರೋ ಕೋಟಿಲಿಂಗ,ಆಲದ ಮರದಂತೆಯೇ ರಚನೆಯಿರೋದ್ರಿಂದಾಗಿ ಆಲದಮರದ ಹಾಲ್,ತರವೇಹಾರಿ ಬೆಳಕುಗಳ ವೈವಿದ್ಯಮಯ ಮಾಯಾ ಮಂದಿರ,ಶಿವಲಿಂಗ ಮೇಲೆ ನೀರು ಬೀಳುತ್ತಿರುವ ಗುಹೆಗಳಲ್ಲಿಯೇ ಅತೀ ಆಳದಲ್ಲಿರೋ ಪಾತಾಳ ಗಂಗೆ,ಧ್ಯಾನ ಮಂದಿರ,ಗೆಬರ್ ಹಾಲ್ ಎಂಬ ಹೆಸರು ನೀಡಲಾಗಿದೆ.



ಉಳಿದುಕೊಳ್ಳಲು.....
ಟೆಂಟ್ ಗಳನ್ನು ಕೊಂಡೊಯ್ದಲ್ಲಿ ಎಲ್ಲಿಯೂ ಹಾಕಿಕೊಳ್ಳುವ ಅವಕಾಶವಿದ್ದು,ಕೋಟೆಯ ಬಳಿಯಲ್ಲಿಯೇ ಪ್ರವಾಸೋದ್ಯಮ ಇಲಾಖೆಯ ಏಕೈಕ ರೆಸಾರ್ಟ್ ಲಭ್ಯವಿದ್ದು ಸಕಲ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿದೆ.ಅಲ್ಲಿಯೂ ಟೆಂಟ್ ಸೌಲಭ್ಯವೂ ಇದೆ.
ಇತ್ತೀಚೆಗೆ ದ್ವೀಪದೊಳಗೂ ಹೊಸದಾಗಿ ಹೋಟೆಲ್ ನಿರ್ಮಾಣವಾಗಿರೋದ್ರಿಂದಾಗಿ ಅಲ್ಲಿಯೂ ಉಳಿದುಕೊಳ್ಳಬಹುದಾಗಿದೆ.

ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳು.
ತಾಡಪತ್ರಿಯ ಇತಿಹಾಸ ಪ್ರಸಿದ್ಧ ಚಿಂತಲ ವೆಂಕಟರಮಣ ಹಾಗೂ ರಾಮ ಲಿಂಗೇಶ್ವರ ದೇವಸ್ಥಾನಗಳು,ಯಗಾಂತಿ ಗುಹಾಂತರ ದೇವಸ್ಥಾನಗಳು,ಮೈಲಾವರಂ ಜಲಾಶಯ.

ಸಮೀಪದ ವಿಮಾನ ನಿಲ್ದಾಣ :- ಬೆಂಗಳೂರು 270ಕಿಮೀ ದೂರದಲ್ಲಿದೆ.
ರೈಲ್ವೇ ನಿಲ್ದಾಣ :- ಕಡಪ ಜಿಲ್ಲೆಯ ಮುದ್ದನೂರು 26ಕಿಮೀ ದೂರದಲ್ಲಿದೆ.
ಸಮೀಪದ ಬಸ್ ನಿಲ್ದಾಣ :- ಜಮ್ಮಲಮಡುಗು ಹದಿನೈದು ಕಿಮೀ ದೂರದಲ್ಲಿದ್ದು ಎಲ್ಲಾ ಊರುಗಳಿಂದಲೂ ಬಸ್ ಸೌಲಭ್ಯವಿದೆ.


#GandikotaFort #NH7 #BelumCaves #BelamCaves
Jammalamadugu kadapa district.
##MylavaramDam #MylavaraWaterReservoir
#LongdriveBangaloreToGandikota.

Saturday, June 30, 2018

                       *****ಚಿರ್ರಾಪುಂಜಿ*****
ಪೂರ್ವೋತ್ತರ ರಾಜ್ಯದಲ್ಲೊಂದು ಮುದ್ದು ಮ(ಳೆ)ಲೆನಾಡು.

ಹೆಸರು ಕೇಳಿದಾಕ್ಷಣ ತಕ್ಷಣ ಕಣ್ಣೆದುರು ಬರೋದೇ ಧೋ ಎಂದು ಸುರಿಯುತ್ತಿರೋ ಜಡಿಮಳೆಯಲ್ಲಿ ತೋಯ್ದು ತೊಪ್ಪೆಯಾಗಿರೋ ಊರೊಂದರ ಚಿತ್ರಣ.ಮೇಘಾಲಯದ ರಾಜಧಾನಿ ಶಿಲ್ಲೋಂಗ್ ನಿಂದ ಕೇವಲ 54 ಕಿಮೀ ದೂರದಲ್ಲಿರೋ ಈಸ್ಟ್ ಖಾಸೀ ಹಿಲ್ಸ್ ಜಿಲ್ಲೆಯ ಈ ಪಟ್ಟಣದ ಮೂಲ ಹೆಸರಾಗಿದ್ದ “ಸೊಹರಾ” ಬ್ರಿಟಿಷರಿಂದ ಚುರ್ರಾ ಎಂಬುದಾಗಿ ಅಪಭ್ರಂಶ ಗೊಂಡು ಈಗ ಚಿರ್ರಾಪುಂಜಿಯಾಗಿದೆ.

ವರ್ಷವಿಡೀ ಮಳೆಯಿಂದ ಕೂಡಿದ ಹಿಮದಿಂದಾವೃತ ತಂಪು ವಾತಾವರಣ ಇಲ್ಲಿನ ಮುಖ್ಯ ಆಕರ್ಷಣೆಯೆನ್ನಿಸಿದರೂ ಅದನ್ನೂ ಮೀರಿಸುವಂತೆ ಕಣ್ಮನ ಸೆಳೆಯೋದು ಇಲ್ಲಿನ ನಯನಮನೋಹರ ಜಲಪಾತಗಳು,ಅನ್ಯಗ್ರಹ ಜೀವಗಳ ಜಗತ್ತೆಂಬಂತೆ ಭಾಸವಾಗಿಸೋ ಗುಹೆಗಳು,ಪರ್ವತ ಶ್ರೇಣಿಗಳು, ಕಣಿವೆ ಪ್ರದೇಶಗಳು, ಅತೀ ಶುಭ್ರ ನದಿಗಳು ಹಾಗೂ ಇವುಗಳಿಗೆಲ್ಲಾ ಕಳಸವಿಟ್ಟಂತಿರೋ ಮರದ ಬೇರುಗಳನ್ನೇ ಹೆಣೆದು ನಿರ್ಮಿಸಲಾದ ಜೀವಂತ ಸೇತುವೆಗಳು ಸೇರಿದಂತೆ ಇನ್ನಿತರ ಸಂಗತಿಗಳು.

ಪ್ರಮುಖ ಆಕರ್ಷಣೆಗಳು.

ನೋರಿಯಾತ್ ಡಬಲ್ ಡೆಕ್ಕರ್ ರೂಟ್ ಬ್ರಿಡ್ಜ್.
ಚಿರ್ರಾಪುಂಜಿಯಿಂದ ಕೇವಲ ಹನ್ನೆರಡು ಕಿಲೋಮೀಟರ್ ದೂರದಲ್ಲಿರೋ ಪುಟ್ಟ ಹಳ್ಳಿ ಟೆರ್ನಾ.ಇಲ್ಲಿಂದ ಬಹುಪಾಲು ಮಟ್ಟಿಲುಗಳಂದಲೇ ಕೂಡಿದ ಕಾಡು ಹಾದಿಯಲ್ಲಿ ಮೂರು ಕಿಮೀ ದೂರ ಪರ್ವತಸಾಲುಗಳನ್ನು ಇಳಿದಲ್ಲಿ ಸಿಗುವ ನೋರಿಯಾತ್ ಎಂಬ ಹಳ್ಳಿಯಲ್ಲಿ ರಾನಿಯಾತ್ ಎಂಬ ನದಿಗಡ್ಡಲಾಗಿ ಇಕ್ಕೆಲದಲ್ಲಿರುವ ಮರದ ಬೇರುಗಳನ್ನೇ ಬಳಸಿಕೊಂಡು ನಿರ್ಮಿಸಲಾಗಿರುವ ಎರಡು ಅಂತಸ್ತುಗಳ ಸೇತುವೆಯಿದು.
ನೋರಿಯಾತ್ ನಲ್ಲಿ ಒಟ್ಟು ಮೂರು ರೂಟ್ ಬ್ರಿಡ್ಜುಗಳಿದ್ದು ಟೆರ್ನಾದಿಂದ ಬರುವ ಹಾದಿಯಲ್ಲಿಯೇ ಕಾಣಸಿಗುವುದಷ್ಟೇ ಅಲ್ಲದೆ ಕಬ್ಬಿಣದ ರೋಪುಗಳು ಹಾಗೂ ಬಿದಿರುಗಳನ್ನು ಬಳಸಿ ನಿರ್ಮಿಸಲಾಗಿರುವ ತೂಗು ಸೇತುವೆಯನ್ನೂ ದಾಟುವ ಅನುಭವ ನಮ್ಮದಾಗಿರುತ್ತದೆ.
ಕಾಮನಬಿಲ್ಲಿನ ಜಲಪಾತವೆಂಬ ಖ್ಯಾತಿಯ ಕಾಲಿಖಾಯ್ ವಾಟರ್ ಫಾಲ್ಸ್ ನ್ನು ಕಣ್ತುಂಬಿಕೊಳ್ಳಬಹುದು.

ಡಾಕಿ.
ಚಿರ್ರಾಪುಂಜಿಯಿಂದ ಎಂಬತ್ತೈದು ಕಿಮೀ ದೂರದಲ್ಲಿರೋ ಭಾರತ ಹಾಗೂ ಬಾಂಗ್ಲಾದೇಶದ ಗಡಿಭಾಗದಲ್ಲಿರುವ ಕೊನೆಯ ಹಳ್ಳಿಯಿದು.
ಗಡಿರೇಖೆಯೆಳೆದಂತೆ ಎರಡು ದೇಶಗಳನ್ನು ಬೇರ್ಪಡಿಸುತ್ತಾ ನಡುವೆ ಹರಿಯುವ ಹಸಿರು ಬಣ್ಣದಲ್ಲಿ ಕಂಗೊಳಿಸೋ ಉಂಗೋಟ್ ನದಿಯೇ ಇಲ್ಲಿನ ಪ್ರಮುಖ ಆಕರ್ಷಣೆ.ಈ ನದಿ ಅದೆಷ್ಟು ಶುಭ್ರ ಹಾಗೂ ಸ್ಪಟಿಕ ಸ್ಪಷ್ಟವಾಗಿದೆ ಎಂದರೆ ಹತ್ತಾರು ಅಡಿಗಳ ಆಳದ ಕಲ್ಲುಗಳನ್ನೂ ಮೇಲ್ಮೈಯಿಂದ ಸ್ಪಷ್ಟವಾಗಿ ಕಾಣಬಹುದಾಗಿದ್ದು,ನದಿಯಲ್ಲಿ ಸಾಗುತ್ತಿರೋ ದೋಣಿಗಳನ್ನು ಕಂಡಾಗ ಒಂದು ಕ್ಷಣ ಗಾಳಿಯಲ್ಲಿ ತೇಲುತ್ತಿವೆಯೇನೋ ದೋಣಿಗಳೆಲ್ಲಾ ಎಂಬ ಭ್ರಮೆ ಮೂಡಿಸಿ ಬಿಡುತ್ತದೆ ನೋಡುಗನಿಗೆ.ನದಿಯಲ್ಲಿ ದೋಣಿ ವಿಹಾರ ಮಾಡಲು ಅನುಕೂಲವಿದ್ದು ಅದರಲ್ಲಿಯೇ ಸಮೀಪದಲ್ಲಿರೋ ದ್ವೀಪವನ್ನೂ ಸುತ್ತಿ ಬರಬಹುದಾಗಿದೆ.ನದಿಗೆ ಅಡ್ಡಲಾಗಿ ಕಬ್ಬಿಣದ ಸೇತುವೆಯೊಂದನ್ನು ನಿರ್ಮಿಸಲಾಗಿದ್ದು ಅದರ ಇನ್ನೊಂದು ಬದಿ ಬಾಂಗ್ಲಾದೇಶಕ್ಕೆ ಸೇರುತ್ತದೆ.


ಮಯಲಿಂಗ್ ಲಾಂಗ್ ವಿಲೇಜ್.
ಏಷ್ಯಾ ಖಂಡದಲ್ಲಿಯೇ ಅತ್ಯಂತ ಸ್ವಚ್ಛ ಹಳ್ಳಿ( ಕ್ಲೀನೆಸ್ಟ್ ವಿಲೇಜ್) ಎಂಬ ಬಿರುದನ್ನು ಪಡೆದಿರುವ ಮಯಲಿಂಗ್ ಲಾಂಗ್ ತನ್ನ ಸ್ವಚ್ಛ ಪರಿಸರದಿಂದಾಗಿಯೇ ಪ್ರಖ್ಯಾತವಾಗಿದೆ.ಬಿದಿರುಗಳನ್ನೇ ಬಳಸಿ ಮರದ ಮೇಲೆ ನಿರ್ಮಿಸಲಾಗಿರೋ ಮನೆಗಳು,ಸಂಪೂರ್ಣ ಸೋಲಾರ್ ವಿದ್ಯುತ್  ವ್ಯವಸ್ಥೆ,ಸಂಪರ್ಕಕ್ಕೆ ಬಿದಿರಿನಿಂದಲೇ ನಿರ್ಮಿಸಿರೋ ಪುಟ್ಟ ತೂಗು ಕಾಲು ಹಾದಿಗಳು,ಬಿದಿರಿನಿಂದಲೇ ಯಾರಿಸಲಾದ ಕಲಾಕೃತಿಗಳಂತೆ ಭಾಸವಾಗೋ ಕಸದ ತೊಟ್ಟಿಗಳು.ಕಸಕಡ್ಡಿಗಳ,ದುರ್ವಾಸನೆಯ ಗಂಧಗಾಳಿಯೂ ಸುಳಿಯದಂತಹ ವಾತಾವರಣ.ಇಲ್ಲಿ ಎಲ್ಲವೂ ಶುದ್ಧ ಹಾಗೂ ಶಿಸ್ತು ಬದ್ಧ. ನಿಮಗಿಷ್ಟ ಬಂದಂತೆ ಸುತ್ತಬಹುದು ಪ್ರಕೃತಿಯನ್ನು ಆಸ್ವಾದಿಸಬಹುದು,ನಿರ್ಧಿಷ್ಟ ಜಾಗಗಳನ್ನು ಹೊರತು ಪಡಿಸಿ ಬೇರೆಲ್ಲೂ ಸಣ್ಣದೊಂದು ಕಡ್ಡಿಯನ್ನೆಸೆದರೂ ದಂಡ ಶತಸಿದ್ಧ.ಇಲ್ಲಿಯೂ ಒಂದು ಮರದ ಜೀವಂತ ಬೇರುಗಳಿಂದ ನಿರ್ಮಿಸಿದ ರೂಟ್ ಬ್ರಿಡ್ಜ್,ಜಲಪಾತಗಳನ್ನು ಕಾಣಬಹುದಾಗಿದೆ.



ಮೋಸಿನ್ ರಾಮ್.
ಜಗತ್ತಿನಲ್ಲಿಯೇ ಅತೀ ಹೆಚ್ಚು ಮಳೆ ಬೀಳುವ ಜಾಗವೆಂಬ ಖ್ಯಾತಿಯನ್ನು ತನ್ನ ಮುಡಿಗೇರಿಸಿಕೊಂಡಿರುವ ಪ್ರದೇಶವಿದು.ಈ ಹಳ್ಳಿಯಲ್ಲಿರೋ ಗುಹೆಗಳನ್ನಂತೂ ನೋಡದೆ ಹಿಂದಿರುಗಲು ಸಾಧ್ಯವೇ ಇಲ್ಲ.ಕಿಲೋಮೀಟರುಗಟ್ಟಲೇ ಚಾಚಿಕೊಂಡಿರೋ ಈ ಗುಹೆಗಳ ಒಳಭಾಗ ಹೊಸ ಜಗತ್ತನ್ನೇ ಅನಾವರಣಗೊಳಿಸಿಬಿಡುತ್ತವೆ.ಮಾಸ್ ಮೈ ಹಾಗೂ ಕ್ರಿಮ್ ಮುಮ್ಲು ಎಂಬ ಗುಹೆಗಳ ಒಳರಚನೆಯಂತೂ ಏಲಿಯನ್ ಗಳ ಜಗತ್ತಿನಲ್ಲಿದ್ದೇವೇನೋ ಎಂಬ ಭಾವನೆ ಮೂಡಿಸುತ್ತವೆ ನೋಡುಗನಲ್ಲಿ.

ನೋಕಾಲಿಕೈ ಜಲಪಾತ.
ಜಗತ್ತಿನ ಅತ್ಯಂತ ಎತ್ತರದ ಜಲಪಾತಗಳಲ್ಲೊಂದು ಎಂಬ ಖ್ಯಾತಿಯ ನೊಕಾಲಿಕೈ ಜಲಪಾತವಿರೋದು ಚಿರಾಪುಂಜಿಯಿಂದ ಕೇವಲ ಎಂಟು ಕಿಮೀ ಅಂತರದಲ್ಲಿ.ಜಲಪಾತದ ವಿಶೇವೆಂದರೆ ಇದರ ತಳಭಾಗ ಚಳಿಗಾಲದಲ್ಲಿ ನೀಲಿ ಬಣ್ಣದಿಂದ ಆಕರ್ಷಿಸಿದರೆ ಬೇಸಿಗೆಯಲ್ಲಿ ಸಂಪೂರ್ಣ ಹಸಿರು ಬಣ್ಣದಿಂದ ಕಂಗೊಳಿಸುತ್ತಿರುತ್ತದೆ.

ಇನ್ನಿತರ ಪ್ರೇಕ್ಷಣೀಯ ಸ್ಥಳಗಳು.
ಖಾಸಿ ನಾಗರೀಕತೆಯ ಉಗಮದ ಸಂಕೇತವಾಗಿ ನಿಲ್ಲಿಸಲಾಗಿರೋ ಖಾಸೀ ಏಕಶಿಲೆಗಳು.
ನಾನಿಥಾಂಗ್ ಅಥವಾ ಸೆವೆನ್ ಸಿಸ್ಟರ್ಸ್ ಜಲಪಾತ.
ಕೈನಮ್ ಜಲಪಾತ.ದೈಂಥನ್ ಜಲಪಾತ.ವಕಾಬಾ ಜಲಪಾತ.


ತಂಗಲು ವ್ಯವಸ್ಥೆ?
ಚಿರ್ರಾಪುಂಜಿ,ಮಯಲಿಂಗ್ ಲಾಂಗ್,ಡಾಕೀ ಹಾಗೂ ಮೋಸಿನ್ ರಾಮ್ ನಲ್ಲಿ ಹೋಟೆಲ್ ಹಾಗೂ ಹೋಮ್ ಸ್ಟೇ ಗಳು,ಬಿದಿರಿನ ಗುಡಿಸಲುಗಳು ಲಭ್ಯವಿದ್ದು,
ಮಯಲಿಂಗ್ ಲಾಂಗ್ ನಲ್ಲಿ ಟ್ರೀ ಹೌಸುಗಳೂ ಲಭ್ಯವಿದೆ.



ಹೇಗೆ ತಲುಪೋದು?
ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನ ವರೆಗೂ ವಿಮಾನ ಸಂಪರ್ಕ ಸಾಧ್ಯವಿದ್ದು ಅಲ್ಲಿಂದ ರಸ್ತೆ ಮಾರ್ಗವಾಗಿ ಚಿರ್ರಾಪುಂಜಿ ತಲುಪಬಹುದು.
ರೈಲು ಮಾರ್ಗವಾಗಿ ಗುವಹಾಟಿಯ ವರೆಗೂ ತಲುಪಿ ಅಲ್ಲಿಂದ ರಸ್ತೆ ಮಾರ್ಗವಾಗಿ ಚಿರ್ರಾಪುಂಜಿ ತಲುಪಬಹುದು.


ಪ್ರಯಾಣಕ್ಕೆ ಸೂಕ್ತ ಕಾಲ?
 ಸೆಪ್ಟೆಂಬರ್ ನಿಂದ ಮೇ ತಿಂಗಳಿನ ನಡುವಲ್ಲಿ ಕಡಿಮೆ ಮಳೆಯಿರುವ ಕಾರಣ ಪ್ರವಾಸಕ್ಕೆ ಪ್ರಶಸ್ತಕಾಲ.