Saturday, June 30, 2018

                       *****ಚಿರ್ರಾಪುಂಜಿ*****
ಪೂರ್ವೋತ್ತರ ರಾಜ್ಯದಲ್ಲೊಂದು ಮುದ್ದು ಮ(ಳೆ)ಲೆನಾಡು.

ಹೆಸರು ಕೇಳಿದಾಕ್ಷಣ ತಕ್ಷಣ ಕಣ್ಣೆದುರು ಬರೋದೇ ಧೋ ಎಂದು ಸುರಿಯುತ್ತಿರೋ ಜಡಿಮಳೆಯಲ್ಲಿ ತೋಯ್ದು ತೊಪ್ಪೆಯಾಗಿರೋ ಊರೊಂದರ ಚಿತ್ರಣ.ಮೇಘಾಲಯದ ರಾಜಧಾನಿ ಶಿಲ್ಲೋಂಗ್ ನಿಂದ ಕೇವಲ 54 ಕಿಮೀ ದೂರದಲ್ಲಿರೋ ಈಸ್ಟ್ ಖಾಸೀ ಹಿಲ್ಸ್ ಜಿಲ್ಲೆಯ ಈ ಪಟ್ಟಣದ ಮೂಲ ಹೆಸರಾಗಿದ್ದ “ಸೊಹರಾ” ಬ್ರಿಟಿಷರಿಂದ ಚುರ್ರಾ ಎಂಬುದಾಗಿ ಅಪಭ್ರಂಶ ಗೊಂಡು ಈಗ ಚಿರ್ರಾಪುಂಜಿಯಾಗಿದೆ.

ವರ್ಷವಿಡೀ ಮಳೆಯಿಂದ ಕೂಡಿದ ಹಿಮದಿಂದಾವೃತ ತಂಪು ವಾತಾವರಣ ಇಲ್ಲಿನ ಮುಖ್ಯ ಆಕರ್ಷಣೆಯೆನ್ನಿಸಿದರೂ ಅದನ್ನೂ ಮೀರಿಸುವಂತೆ ಕಣ್ಮನ ಸೆಳೆಯೋದು ಇಲ್ಲಿನ ನಯನಮನೋಹರ ಜಲಪಾತಗಳು,ಅನ್ಯಗ್ರಹ ಜೀವಗಳ ಜಗತ್ತೆಂಬಂತೆ ಭಾಸವಾಗಿಸೋ ಗುಹೆಗಳು,ಪರ್ವತ ಶ್ರೇಣಿಗಳು, ಕಣಿವೆ ಪ್ರದೇಶಗಳು, ಅತೀ ಶುಭ್ರ ನದಿಗಳು ಹಾಗೂ ಇವುಗಳಿಗೆಲ್ಲಾ ಕಳಸವಿಟ್ಟಂತಿರೋ ಮರದ ಬೇರುಗಳನ್ನೇ ಹೆಣೆದು ನಿರ್ಮಿಸಲಾದ ಜೀವಂತ ಸೇತುವೆಗಳು ಸೇರಿದಂತೆ ಇನ್ನಿತರ ಸಂಗತಿಗಳು.

ಪ್ರಮುಖ ಆಕರ್ಷಣೆಗಳು.

ನೋರಿಯಾತ್ ಡಬಲ್ ಡೆಕ್ಕರ್ ರೂಟ್ ಬ್ರಿಡ್ಜ್.
ಚಿರ್ರಾಪುಂಜಿಯಿಂದ ಕೇವಲ ಹನ್ನೆರಡು ಕಿಲೋಮೀಟರ್ ದೂರದಲ್ಲಿರೋ ಪುಟ್ಟ ಹಳ್ಳಿ ಟೆರ್ನಾ.ಇಲ್ಲಿಂದ ಬಹುಪಾಲು ಮಟ್ಟಿಲುಗಳಂದಲೇ ಕೂಡಿದ ಕಾಡು ಹಾದಿಯಲ್ಲಿ ಮೂರು ಕಿಮೀ ದೂರ ಪರ್ವತಸಾಲುಗಳನ್ನು ಇಳಿದಲ್ಲಿ ಸಿಗುವ ನೋರಿಯಾತ್ ಎಂಬ ಹಳ್ಳಿಯಲ್ಲಿ ರಾನಿಯಾತ್ ಎಂಬ ನದಿಗಡ್ಡಲಾಗಿ ಇಕ್ಕೆಲದಲ್ಲಿರುವ ಮರದ ಬೇರುಗಳನ್ನೇ ಬಳಸಿಕೊಂಡು ನಿರ್ಮಿಸಲಾಗಿರುವ ಎರಡು ಅಂತಸ್ತುಗಳ ಸೇತುವೆಯಿದು.
ನೋರಿಯಾತ್ ನಲ್ಲಿ ಒಟ್ಟು ಮೂರು ರೂಟ್ ಬ್ರಿಡ್ಜುಗಳಿದ್ದು ಟೆರ್ನಾದಿಂದ ಬರುವ ಹಾದಿಯಲ್ಲಿಯೇ ಕಾಣಸಿಗುವುದಷ್ಟೇ ಅಲ್ಲದೆ ಕಬ್ಬಿಣದ ರೋಪುಗಳು ಹಾಗೂ ಬಿದಿರುಗಳನ್ನು ಬಳಸಿ ನಿರ್ಮಿಸಲಾಗಿರುವ ತೂಗು ಸೇತುವೆಯನ್ನೂ ದಾಟುವ ಅನುಭವ ನಮ್ಮದಾಗಿರುತ್ತದೆ.
ಕಾಮನಬಿಲ್ಲಿನ ಜಲಪಾತವೆಂಬ ಖ್ಯಾತಿಯ ಕಾಲಿಖಾಯ್ ವಾಟರ್ ಫಾಲ್ಸ್ ನ್ನು ಕಣ್ತುಂಬಿಕೊಳ್ಳಬಹುದು.

ಡಾಕಿ.
ಚಿರ್ರಾಪುಂಜಿಯಿಂದ ಎಂಬತ್ತೈದು ಕಿಮೀ ದೂರದಲ್ಲಿರೋ ಭಾರತ ಹಾಗೂ ಬಾಂಗ್ಲಾದೇಶದ ಗಡಿಭಾಗದಲ್ಲಿರುವ ಕೊನೆಯ ಹಳ್ಳಿಯಿದು.
ಗಡಿರೇಖೆಯೆಳೆದಂತೆ ಎರಡು ದೇಶಗಳನ್ನು ಬೇರ್ಪಡಿಸುತ್ತಾ ನಡುವೆ ಹರಿಯುವ ಹಸಿರು ಬಣ್ಣದಲ್ಲಿ ಕಂಗೊಳಿಸೋ ಉಂಗೋಟ್ ನದಿಯೇ ಇಲ್ಲಿನ ಪ್ರಮುಖ ಆಕರ್ಷಣೆ.ಈ ನದಿ ಅದೆಷ್ಟು ಶುಭ್ರ ಹಾಗೂ ಸ್ಪಟಿಕ ಸ್ಪಷ್ಟವಾಗಿದೆ ಎಂದರೆ ಹತ್ತಾರು ಅಡಿಗಳ ಆಳದ ಕಲ್ಲುಗಳನ್ನೂ ಮೇಲ್ಮೈಯಿಂದ ಸ್ಪಷ್ಟವಾಗಿ ಕಾಣಬಹುದಾಗಿದ್ದು,ನದಿಯಲ್ಲಿ ಸಾಗುತ್ತಿರೋ ದೋಣಿಗಳನ್ನು ಕಂಡಾಗ ಒಂದು ಕ್ಷಣ ಗಾಳಿಯಲ್ಲಿ ತೇಲುತ್ತಿವೆಯೇನೋ ದೋಣಿಗಳೆಲ್ಲಾ ಎಂಬ ಭ್ರಮೆ ಮೂಡಿಸಿ ಬಿಡುತ್ತದೆ ನೋಡುಗನಿಗೆ.ನದಿಯಲ್ಲಿ ದೋಣಿ ವಿಹಾರ ಮಾಡಲು ಅನುಕೂಲವಿದ್ದು ಅದರಲ್ಲಿಯೇ ಸಮೀಪದಲ್ಲಿರೋ ದ್ವೀಪವನ್ನೂ ಸುತ್ತಿ ಬರಬಹುದಾಗಿದೆ.ನದಿಗೆ ಅಡ್ಡಲಾಗಿ ಕಬ್ಬಿಣದ ಸೇತುವೆಯೊಂದನ್ನು ನಿರ್ಮಿಸಲಾಗಿದ್ದು ಅದರ ಇನ್ನೊಂದು ಬದಿ ಬಾಂಗ್ಲಾದೇಶಕ್ಕೆ ಸೇರುತ್ತದೆ.


ಮಯಲಿಂಗ್ ಲಾಂಗ್ ವಿಲೇಜ್.
ಏಷ್ಯಾ ಖಂಡದಲ್ಲಿಯೇ ಅತ್ಯಂತ ಸ್ವಚ್ಛ ಹಳ್ಳಿ( ಕ್ಲೀನೆಸ್ಟ್ ವಿಲೇಜ್) ಎಂಬ ಬಿರುದನ್ನು ಪಡೆದಿರುವ ಮಯಲಿಂಗ್ ಲಾಂಗ್ ತನ್ನ ಸ್ವಚ್ಛ ಪರಿಸರದಿಂದಾಗಿಯೇ ಪ್ರಖ್ಯಾತವಾಗಿದೆ.ಬಿದಿರುಗಳನ್ನೇ ಬಳಸಿ ಮರದ ಮೇಲೆ ನಿರ್ಮಿಸಲಾಗಿರೋ ಮನೆಗಳು,ಸಂಪೂರ್ಣ ಸೋಲಾರ್ ವಿದ್ಯುತ್  ವ್ಯವಸ್ಥೆ,ಸಂಪರ್ಕಕ್ಕೆ ಬಿದಿರಿನಿಂದಲೇ ನಿರ್ಮಿಸಿರೋ ಪುಟ್ಟ ತೂಗು ಕಾಲು ಹಾದಿಗಳು,ಬಿದಿರಿನಿಂದಲೇ ಯಾರಿಸಲಾದ ಕಲಾಕೃತಿಗಳಂತೆ ಭಾಸವಾಗೋ ಕಸದ ತೊಟ್ಟಿಗಳು.ಕಸಕಡ್ಡಿಗಳ,ದುರ್ವಾಸನೆಯ ಗಂಧಗಾಳಿಯೂ ಸುಳಿಯದಂತಹ ವಾತಾವರಣ.ಇಲ್ಲಿ ಎಲ್ಲವೂ ಶುದ್ಧ ಹಾಗೂ ಶಿಸ್ತು ಬದ್ಧ. ನಿಮಗಿಷ್ಟ ಬಂದಂತೆ ಸುತ್ತಬಹುದು ಪ್ರಕೃತಿಯನ್ನು ಆಸ್ವಾದಿಸಬಹುದು,ನಿರ್ಧಿಷ್ಟ ಜಾಗಗಳನ್ನು ಹೊರತು ಪಡಿಸಿ ಬೇರೆಲ್ಲೂ ಸಣ್ಣದೊಂದು ಕಡ್ಡಿಯನ್ನೆಸೆದರೂ ದಂಡ ಶತಸಿದ್ಧ.ಇಲ್ಲಿಯೂ ಒಂದು ಮರದ ಜೀವಂತ ಬೇರುಗಳಿಂದ ನಿರ್ಮಿಸಿದ ರೂಟ್ ಬ್ರಿಡ್ಜ್,ಜಲಪಾತಗಳನ್ನು ಕಾಣಬಹುದಾಗಿದೆ.



ಮೋಸಿನ್ ರಾಮ್.
ಜಗತ್ತಿನಲ್ಲಿಯೇ ಅತೀ ಹೆಚ್ಚು ಮಳೆ ಬೀಳುವ ಜಾಗವೆಂಬ ಖ್ಯಾತಿಯನ್ನು ತನ್ನ ಮುಡಿಗೇರಿಸಿಕೊಂಡಿರುವ ಪ್ರದೇಶವಿದು.ಈ ಹಳ್ಳಿಯಲ್ಲಿರೋ ಗುಹೆಗಳನ್ನಂತೂ ನೋಡದೆ ಹಿಂದಿರುಗಲು ಸಾಧ್ಯವೇ ಇಲ್ಲ.ಕಿಲೋಮೀಟರುಗಟ್ಟಲೇ ಚಾಚಿಕೊಂಡಿರೋ ಈ ಗುಹೆಗಳ ಒಳಭಾಗ ಹೊಸ ಜಗತ್ತನ್ನೇ ಅನಾವರಣಗೊಳಿಸಿಬಿಡುತ್ತವೆ.ಮಾಸ್ ಮೈ ಹಾಗೂ ಕ್ರಿಮ್ ಮುಮ್ಲು ಎಂಬ ಗುಹೆಗಳ ಒಳರಚನೆಯಂತೂ ಏಲಿಯನ್ ಗಳ ಜಗತ್ತಿನಲ್ಲಿದ್ದೇವೇನೋ ಎಂಬ ಭಾವನೆ ಮೂಡಿಸುತ್ತವೆ ನೋಡುಗನಲ್ಲಿ.

ನೋಕಾಲಿಕೈ ಜಲಪಾತ.
ಜಗತ್ತಿನ ಅತ್ಯಂತ ಎತ್ತರದ ಜಲಪಾತಗಳಲ್ಲೊಂದು ಎಂಬ ಖ್ಯಾತಿಯ ನೊಕಾಲಿಕೈ ಜಲಪಾತವಿರೋದು ಚಿರಾಪುಂಜಿಯಿಂದ ಕೇವಲ ಎಂಟು ಕಿಮೀ ಅಂತರದಲ್ಲಿ.ಜಲಪಾತದ ವಿಶೇವೆಂದರೆ ಇದರ ತಳಭಾಗ ಚಳಿಗಾಲದಲ್ಲಿ ನೀಲಿ ಬಣ್ಣದಿಂದ ಆಕರ್ಷಿಸಿದರೆ ಬೇಸಿಗೆಯಲ್ಲಿ ಸಂಪೂರ್ಣ ಹಸಿರು ಬಣ್ಣದಿಂದ ಕಂಗೊಳಿಸುತ್ತಿರುತ್ತದೆ.

ಇನ್ನಿತರ ಪ್ರೇಕ್ಷಣೀಯ ಸ್ಥಳಗಳು.
ಖಾಸಿ ನಾಗರೀಕತೆಯ ಉಗಮದ ಸಂಕೇತವಾಗಿ ನಿಲ್ಲಿಸಲಾಗಿರೋ ಖಾಸೀ ಏಕಶಿಲೆಗಳು.
ನಾನಿಥಾಂಗ್ ಅಥವಾ ಸೆವೆನ್ ಸಿಸ್ಟರ್ಸ್ ಜಲಪಾತ.
ಕೈನಮ್ ಜಲಪಾತ.ದೈಂಥನ್ ಜಲಪಾತ.ವಕಾಬಾ ಜಲಪಾತ.


ತಂಗಲು ವ್ಯವಸ್ಥೆ?
ಚಿರ್ರಾಪುಂಜಿ,ಮಯಲಿಂಗ್ ಲಾಂಗ್,ಡಾಕೀ ಹಾಗೂ ಮೋಸಿನ್ ರಾಮ್ ನಲ್ಲಿ ಹೋಟೆಲ್ ಹಾಗೂ ಹೋಮ್ ಸ್ಟೇ ಗಳು,ಬಿದಿರಿನ ಗುಡಿಸಲುಗಳು ಲಭ್ಯವಿದ್ದು,
ಮಯಲಿಂಗ್ ಲಾಂಗ್ ನಲ್ಲಿ ಟ್ರೀ ಹೌಸುಗಳೂ ಲಭ್ಯವಿದೆ.



ಹೇಗೆ ತಲುಪೋದು?
ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನ ವರೆಗೂ ವಿಮಾನ ಸಂಪರ್ಕ ಸಾಧ್ಯವಿದ್ದು ಅಲ್ಲಿಂದ ರಸ್ತೆ ಮಾರ್ಗವಾಗಿ ಚಿರ್ರಾಪುಂಜಿ ತಲುಪಬಹುದು.
ರೈಲು ಮಾರ್ಗವಾಗಿ ಗುವಹಾಟಿಯ ವರೆಗೂ ತಲುಪಿ ಅಲ್ಲಿಂದ ರಸ್ತೆ ಮಾರ್ಗವಾಗಿ ಚಿರ್ರಾಪುಂಜಿ ತಲುಪಬಹುದು.


ಪ್ರಯಾಣಕ್ಕೆ ಸೂಕ್ತ ಕಾಲ?
 ಸೆಪ್ಟೆಂಬರ್ ನಿಂದ ಮೇ ತಿಂಗಳಿನ ನಡುವಲ್ಲಿ ಕಡಿಮೆ ಮಳೆಯಿರುವ ಕಾರಣ ಪ್ರವಾಸಕ್ಕೆ ಪ್ರಶಸ್ತಕಾಲ.


Saturday, June 23, 2018

                      *****ವರಂಗ-ಕೆರೆ ಬಸದಿ*****

ಕೆಂದಾವರೆಗಳಿಂದಾವೃತವಾದ ಕೊಳದ ನಡುವಲ್ಲೊಂದು ಕಲ್ಲಿನ ಕಮಲವರಳಿ ನಿಂತಂತೆ ಕಾಣುವ,ರಾಜ್ಯದಿಂದಲ್ಲದೆ ಹೊರ ರಾಜ್ಯಗಳಿಂದಲೂ ಜನರನ್ನು ಇನ್ನಿಲ್ಲದಂತೆ ತನ್ನತ್ತ ಸೆಳೆಯುತ್ತಿರೋ ಪುಟ್ಟ ಗುಡಿಯೇ ವರಂಗ ಬಸದಿಯೆಂದು,ಇತ್ತೀಚೆಗೆ ತೆತೆಕಂಡ "ಮುಗುಳುನಗೆ" ಚಲನಚಿತ್ರದ ನಂತರದಲ್ಲಿ ಮುಗುಳುನಗೆ ಮೂವೀ ಸ್ಪಾಟು ಎಂದೆಲ್ಲಾ ಪ್ರಖ್ಯಾತವಾಗಿರುವ ಕೆರೆ ಬಸದಿ.


ವರಂಗದಲ್ಲಿ ಕೆರೆ ಬಸದಿ,ನೇಮಿನಾಥ ಬಸದಿ ಹಾಗೂ ಚಂದ್ರನಾಥ ಬಸದಿ ಎಂಬ ಮೂರು ಬಸದಿಗಳಿದ್ದು,ಮೂರೂ ಬಸದಿಗಳು ತಮ್ಮದೇ ಆದ ವಿಭಿನ್ನತೆ ಹಾಗೂ ವಿಶೇಷತೆಗಳನ್ನು ಹೊಂದಿರುವುದು ಗಮನಿಸಬೇಕಾದ ಸಂಗತಿ.ಸುಮಾರು 1200 ವರ್ಷಗಳ ಹಿಂದೆ ವರಂಗರಾಯನೆಂಬ ಜೈನದೊರೆ ನಿರ್ಮಿಸಿದನೆನ್ನಲಾದ ಈ ಬಸದಿಗಳಿರೋದು ಕಾರ್ಕಳದಿಂದ ಹೆಬ್ರಿ ಮಾರ್ಗವಾಗಿ 24ಕಿಮೀ ಸಾಗಿದಲ್ಲಿ ಸಿಗುವ ವರಂಗ ಎಂಬ ಪುಟ್ಟ ಹಳ್ಳಿಯೊಂದರಲ್ಲಿ.

ಕೆರೆ ಬಸದಿ.
ಸುಮಾರು ಹದಿನೈದು ಎಕರೆ ವಿಸ್ತೀರ್ಣದಲ್ಲಿ ಹರಟಿಕೊಂಡಿರೋ ವಿಶಾಲ ಕೆರೆಯ ನಡುವಲ್ಲಿ ನಕ್ಷತ್ರಾಕಾರದಂತೆ ಹೊಯ್ಸಳ ಹಾಗೂ ಚಾಳುಕ್ಯ ಶೈಲಿಯ ಸಮ್ಮಿಶ್ರಣದಲ್ಲಿ ಗುಡಿಯ ನಿರ್ಮಾಣ ಮಾಡಲಾಗಿದ್ದು ನಾಲ್ಕೂ ಬದಿಯಿಂದ ಪ್ರವೇಶಧ್ವಾರ ನಿರ್ಮಿಸಲಾಗಿದೆ.ಮಂಟಪದ ಒಳಭಾಗದಲ್ಲಿ ಮೊದಲ ಹಂತದಲ್ಲಿ ಪ್ರದಕ್ಷಿಣೆ ಮಂಟಪವೊಂದನ್ನು ನಿರ್ಮಿಸಲಾಗಿದ್ದು  ನಡುವಲ್ಲಿರೋ ಗರ್ಭಗುಡಿಯಲ್ಲಿ ನಾಲ್ಕು ಬದಿಗೆ ಧ್ವಾರಗಳತ್ತ ಮುಖ ಮಾಡಿದಂತೆ ಪಾರ್ಶ್ವನಾಥ, ಶಾಂತಿನಾಥ,ಅನಂತನಾಥ,ನೇಮಿನಾಥ ರ ವಿಗ್ರಹಗಳಿವೆ.ಪಾರ್ಶ್ವನಾಥನೇ ಇಲ್ಲಿನ ಆರಾಧ್ಯ ದೈವವಾಗಿದ್ದು ಆತನ ಎದುರಲ್ಲಿ ಪದ್ಮಾವತಿ ಹಾಗೂ ಯಕ್ಷಿಯರ ವಿಗ್ರಹಗಳಿವೆ.


ದೋಣಿಯ ಸಹಾಯವಿಲ್ಲದೆ ಈ ಬಸದಿಯ ದರ್ಶನ ಅಸಾಧ್ಯ ಎಂಬುದು ಒಂದು ವಿಶೇಷವಾದರೆ,ಇಲ್ಲಿನ ಅರ್ಚಕನೇ ಈ ದೋಣಿ ನಡೆಸೋ ಅಂಬಿಗ ಎಂಬುದು ಮತ್ತೊಂದು ವಿಶೇಷ.ಭಕ್ತರನ್ನು ತಾನೇ ದೋಣಿ ನಡೆಸಿ ಕರೆತಂದು ಪೂಜೆ ಸಲ್ಲಿಸಿ ಮರಳಿ ಕೊಂಡೊಯ್ದು ದಡ ಸೇರಿಸುವುದು ಅರ್ಚಕರ ನಿತ್ಯದ ಕಾಯಕವಾಗಿದ್ದು ಒಂದಿನಿತೂ ಸಿಡಿಮಿಡಿಗೊಳ್ಳದೆ ತನ್ನ ಕಾಯಕದಲ್ಲಿನ ಈತನ ಶೃದ್ಧೆ ಶ್ಲಾಘನೀಯ.


ನೇಮಿನಾಥ ಬಸದಿ.
ಈ ಬಸದಿಗೆ ಹೆರೆ ಬಸದಿಯೆಂಬ ಹೆಸರೂ ಇದ್ದು ಹೆರೆ ಎಂದರೆ ಹಿರಿಯ ಅಥವಾ ದೊಡ್ಡ ಎಂದರ್ಥ.ಎತ್ತರವಾದ ಗೋಪುರವನ್ನೊಳಗೊಂಡಂತೆ ವಿಶಾಲವಾಗಿ ಇರ್ಮಿಸಲಾಇದ್ದು,ಇಲ್ಲಿ ಇಪ್ಪತ್ನಾಲ್ಕು ತೀರ್ಥಂಕರರ ವಿಗ್ರಹಗಳಿವೆ.ಇಲ್ಲಿನ ಪ್ರಮುಖ ಆಕರ್ಷಣೆ ಐದು ಅಡಿ ಎತ್ತರದ ಕಪ್ಪುಶಿಲೆಯಲ್ಲಿ ನಿರ್ಮಿಸಲಾಗಿರೋ ನೇಮಿನಾಥನ ವಿಗ್ರಹ.ಈತನೇ ಇಲ್ಲಿನ ಗ್ರಾಮದೇವತೆಯೂ ಆಗಿದ್ದು ಈತನಿಗೇ ಅಗ್ರಪೂಜೆ.ಈತನ ಜೊತೆಯಲ್ಲಿ ಕುಷ್ಮಾಂದಿನಿ,ಅಂಬಿಕಾದೇವಿ ಹಾಗೂ ಪದ್ಮಾವತಿಯರ ವಿಗ್ರಹಗಳಿದ್ದು ದೇವಸ್ಥಾನದ ಹೊರಬದಿಯಲ್ಲಿ 45 ಅಡಿ ಎತ್ತರದ ಮಾನಸ್ಥಂಬವಿದೆ.ಇಲ್ಲಿನ ನೇಮಿನಾಥನ ವಿಗ್ರಹ ಒಂದು ಭಾಗಕ್ಕೆ ಸ್ವಲ್ಪ ವಾಲಿಕೊಂಡಂತಿರೋದ್ರಿಂದ ವಾರಂಗ(ವಾರೆ-ಅಂಗ) ಎಂಬ ಹೆಸರು ಬರಲು ಕಾರಣವಾಯ್ತು ಎನ್ನುತ್ತಾರೆ.


ಚಂದ್ರನಾಥ ಬಸದಿ.
ಚಂದ್ರನಾಥ ಬಸದಿಯನ್ನು ಸ್ಥಳೀಯವಾಗಿ ಮಠದ ಬಸದಿಯೆಂದೇ ಕರೆಯುವ ರೂಢಿಯಿದ್ದು ಇಲ್ಲಿಂದಲೇ ಮಠದ ಕಾರ್ಯಸೂಚಿಗಳು ಜರುಗುತ್ತವೆ.ಎಂಟನೇ ತೀರ್ಥಂಕರ ಚಂದ್ರಪ್ರಭ ಇಲ್ಲಿನ ಮುಖ್ಯ ದೇವತೆಯಾಗಿದ್ದು,ಚಂದ್ರಶಿಲೆಯಿಂದ ನಿರ್ಮಿಸಲಾಗಿರೋ ಈತನ ವಿಗ್ರಹ ಪ್ರಮುಖ ಆಕರ್ಷಣೆ.ಯಾಕೆಂದರೆ ವಿಗ್ರಹದ ಪ್ರಭೆ ಕಣ್ಣು ಕೋರೈಸುವಂತಿದ್ದು,ಸದಾ ಸುತ್ತಲೂ ಆವರಿಸಿರೋದನ್ನು ಕಾಣಬಹುದು.
ವರಂಗ ಬಸದಿಗಳ ವಿಶೇಷವೆಂದರೆ ಇಲ್ಲಿನ ಯತಿಗಳೇ ಸದಾ ಶ್ರವಣಬೆಳಗೊಳದ ಮಠಾದೀಶರಾಗುತ್ತಾರೆ.ಇಲ್ಲಿನ ಆಡಳಿತವನ್ನು ಹೊಂಬುಜದ ಮಠಾದೀಶರು ನೋಡಿಕೊಳ್ಳುತ್ತಾರೆ.
ಮತ್ತೊಂದು ವೈಶಿಷ್ಟ್ಯವೆಂದರೆ ಜೈನ ವಾಸ್ತುಶಿಲ್ಪದ ನಾಲ್ಕು ಪ್ರಕಾರಗಳಾದ ಬಸದಿ,ಮಾನಸ್ಥಂಬ,ಏಕಶಿಲಾ ವಿಗ್ರಹ ಹಾಗೂ ಸಮಾಧಿ ಇವೆಲ್ಲವುಗಳನ್ನೂ ಇಲ್ಲಿಯೇ ಕಣ್ತುಂಬಿಕೊಳ್ಳಬಹುದಾಗಿದೆ.

ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳು.
ಬೇಡರಾಜನ ಬೆಟ್ಟ.
ಕೆರೆಬಸದಿಯ ಪಕ್ಕದಲ್ಲಿಯೇ ದೊಡ್ಡದೊಂದು ಬೆಟ್ಟವಿದ್ದು ಅದನ್ನೇರಿ ಬೇಡರಾಜನೆಂಬ ಜೈನ ದೊರೆಯ ಅರಮನೆಯ ಕುರುಹುಗಳನ್ನು ವೀಕ್ಷಿಸಬಹುದಾಗಿದೆ.

ಮೂಡಬಿದ್ರೆಯ ಸಾವಿರ ಕಂಬದ ಬಸದಿ.
14ನೇ ಶತಮಾಮದಲ್ಲಿ ದೇವರಾಯ ಒಡೆಯರ್ ನಿರ್ಮಿಸಿದ ಈ ಬಸದಿಯಲ್ಲಿ ಸಾವಿರ ಕಂಬಗಳನ್ನು ನಿರ್ಮಿಸಲಾಗಿದ್ದು ಪ್ರತಿಯೊಂದೂ ಪ್ರತ್ಯೇಕ ರಚನೆಯನ್ನೊಳಗೊಂಡಿರೋದು ವಿಶೇಷ.ಜೈನ ತೀರ್ಥಂಕರನ ಎಂಟು ಅಡಿಯ ಬೃಹತ್ ವಿಗ್ರಹವಿದ್ದು,ಬಸದಿಯ ಮುಂಬಾಗದಲ್ಲಿ 60ಅಡಿಗಳ ಎತ್ತರದ ಮಾನಸ್ಥಂಬವಿದೆ.
ಇದಲ್ಲದೆ ಗುರುಬಸದಿ,ವಿಕ್ರಮಬಸದಿ,ಮಹಾದೇವಬಸದಿ,ಚೋಳ ಬಸದಿ,ಕೋಟಿ ಬಸದಿ,ಧರ್ಮಾಶೆಟ್ಟಿ ಬಸದಿ ಯಲ್ಲದೆ ಅಮ್ಮನವರ ಬಸದಿಯನ್ನೂ ವೀಕ್ಷಿಸಬಹುದು.


ಹೆಬ್ರಿಯ ಸೀತಾನದಿ ನಿಸರ್ಗಧಾಮ.
ಇಲ್ಲಿ ಉಳಿದುಕೊಳ್ಳಲು ಜಂಗಲ್ ರೆಸಾರ್ಟುಗಳು ಹಾಗೂ ಟೆಂಟ್ ಹೌಸುಗಳು ಲಭ್ಯವಿದ್ದು ಮಳೆಗಾಲದಲ್ಲಿ ರಿವರ್ ರಾಫ್ಟಿಂಗ್ ಸೇರಿದಂತೆ ಇನ್ನಿತರ ಅಡ್ವೆಂಚರ್ ಗಳ ಅನುಭವ ಪಡೆಯಬಹುದು.ಇಷ್ಟೇ ಅಲ್ಲದೆ ಚಾರಣ,ಕಾಡಿನ ನಡಿಗೆ ಹಾಗೂ ಫಿಶಿಂಗ್ ಕ್ಯಾಂಪುಗಳನ್ನೂ ಆಯೋಜಿಸಲಾಗುತ್ತಿರುತ್ತದೆ.


ಕೂಡ್ಲು ತೀರ್ಥ ವಾಟರ್ ಫಾಲ್ಸ್.
ಹೆಬ್ರಿಯಿಂದ ಆಗುಂಬೆ ಮಾರ್ಗದಲ್ಲಿ ನಾಲ್ಕು ಕಿಮೀ ಸಾಗಿದಲ್ಲಿ ಸಿಗುವ ಈ ಜಲಪಾತಕ್ಕೆ ಸೀತಾಫಾಲ್ಸ್ ಎಂಬ ಹೆಸರೂ ಇದೆ.
ಜಲಪಾತದ ಸಮೀಪದ ವರೆಗೂ ರಸ್ತೆ ಲಭ್ಯವಿದ್ದು ನಂತರದಲ್ಲಿ ಒಂದು ಕಿಮೀ ನಡೆಯಬೇಕಾಗುತ್ತದೆ.ಇಲ್ಲಿಯೂ ಸಮೀಪದಲ್ಲಿ ಜಂಗಲ್ ಕ್ಯಾಂಪುಗಳಿದ್ದು ಉಳಿದುಕೊಳ್ಳಲು ವ್ಯವಸ್ಥೆಯಿರುತ್ತದೆ.


ತಲುಪುವ ಬಗೆ...
ಕಾರ್ಕಳದಿಂದ ಹೆಬ್ರಿ ಮಾರ್ಗವಾಗಿ 24ಕಿಮೀ,
ಹೆಬ್ರಿಯಿಂದ ಅಂತರ 6ಕಿಮೀ.
ಉಡುಪಿಯಿಂದ ಅಂತರ 42 ಕಿಮೀ
ಮಂಗಳೂರಿನಿಂದ ಅಂತರ 85ಕಿಮೀ.
ಬೆಂಗಳೂರಿನಿಂದ ಅಂತರ 388ಕಿಮೀ.

ಸಮೀಪದ ವಿಮಾನ ನಿಲ್ದಾಣ ಮಂಗಳೂರು.
ಸಮೀಪದ ರೈಲ್ವೇ ನಿಲ್ದಾಣ ಉಡುಪಿ.
ಸಮೀಪದ ಬಸ್ ನಿಲ್ದಾಣ ಹೆಬ್ರೀ.


Thursday, June 21, 2018



"ಕಾಶ್ಮೀರ ಕಣಿವೆಯಲ್ಲೊಂದು ಕರಾಳ ರಾತ್ರಿ"
(ಭಾಗ ಮೂರು)

ಆ ಸ್ಟೇಷನ್ ಇರೋ ಜಾಗವಾದ್ರೂ ಎಂತದ್ದು ಅಂತೀರೀ....
ಭರೋ ಹಂತ ಹರಿಯುತ್ತಿರೋ ಚೆನಾಬ್ ನದಿ,
ಆ ನದಿಯನ್ನು ಬಳಸಿಕೊಂಡು ಸದ್ದಿಲ್ಲದೆ ಮಲಗಿರೋ ಪ್ರಪಾತಕ್ಕೊಂದು ಕೈ ತಾಗಿಸಿದಂತೆಯೇ ಪವಡಿಸಿರೋ ಹೆಬ್ಬಾವಿನಂತಹ ರಸ್ತೆಯಲ್ಲಿ ಕಿಲೋಮೀಟರುಗಟ್ಟಲೆ ಸಾಗಿ ಮೇಲೇರಿ ಬಂದರೆ ಸಿಗೋ ಪರ್ವತವೊಂದರ ತುದಿಯಲ್ಲೊಂದು ಹತ್ತಡಿಯ ಭದ್ರ ಕೋಟೆಯಂತಹ ಕಾಂಪೋಂಡು.
ಅದಕ್ಕೊಂದು ಬ್ರಿಟಿಷರ ಕಾಲದ ಗೇಟು,
ಅದರೊಳಗೆ ಪ್ರವೇಶಿಸಿದರೆ ಒಂದು ಪಾರ್ಕಿಂಗಿನಂತಹ ಜಾಗ,
ಅದನ್ನು ದಾಟಿ ನಡೆದರೆ ಮತ್ತೊದು ಸಣ್ಣ ಆರಡಿಯ ಕಾಂಪೋಂಡು,
ಅಲ್ಲಿಂದ ಒಳಹೋದರೆ ಸಿಗೋದೇ ರಾಜರ ಕಾಲದ ದೊಡ್ಡ ಬಂಗಲೆ,
ಆ ಭೂತ ಬಂಗಲೆಯೇ ಪೊಲೀಸ್ ಸ್ಟೇಷನ್....

ಇದ್ದ ಬದ್ದ ವಸ್ತುಗಳನ್ನೆಲ್ಲಾ ಕಸಿದುಕೊಂಡದ್ದಾಗಿದೆ,
ಪುಣ್ಯಕ್ಕೆ ಬಟ್ಟೆಯೊಂದನ್ನು ಕಿತ್ತುಕೊಳ್ಳದೆ ಕರುಣೆ ತೋರಿದ್ದಾರೆ.ನಮ್ಮದೋ ಐಸಿಯು ವಾರ್ಡೊಂದರ ಎದುರು ಕುಳಿತ ರೋಗಿಯ ಸಂಬಂಧಿಕರಂತಾಗಿದೆ ಪರಿಸ್ಥಿತಿ, ಮುಂದೇನೆಂಬುದೂ ಗೊತ್ತಿರದ,ಏನು ಮಾಡಲೂ ತೋಚದ,ಯಾರಲ್ಲಿಯೂ ಏನೂ ಹೇಳಲಾಗದ ಅಥವಾ ಪ್ರಶ್ನಿಸಲಾಗದ ಅಸಹಾಯಕ ಸ್ಥಿತಿ..‌‌‌‌.

ಮೊದಲೇ ಪಾಕ್ ಪರ ಸಿದ್ದಾಂತದ,
ಭಾರತವೆಂದರೆ ಭಾರತೀಯ ಸೇನೆಯೆಂದರೆ ಉರಿದುಬೀಳೋ,ಶತಾಯ ಗತಾಯ ಕಾಶ್ಮೀರವನ್ನು ಭಾರತದಿಂದ ಕತ್ತರಿಸಿ ಬದಿಗಿರಿಸಿ ಸಂಭ್ರಮಾಚರಣೆ ಮಾಡಬೇಕೆಂಬ ಕನಸು ಕಾಣ್ತಿರೋ ಬಡ್ಡೀಮಕ್ಳು ಜೊತೆಗಿದ್ದಾರೆ.
ಅವರಷ್ಟೇ ಪಾಖಂಡಿಗಳು ಅಂದುಕೊಳ್ಳಬೇಡಿ,ಈ ಸರ್ದಾರ್ಜಿಯೇನು ಕಡಿಮೆಯೇ?
ಈತನೂ ಅಖಾಲ್ ತಕ್ತ್ ಹಾಗೂ ಖಲಿಸ್ತಾನದ ಪ್ರತ್ಯೇಕ ಪಂಜಾಬಿನ ಪ್ರತಿಪಾದಕ ಜೊತೆಗೇ ಉಗ್ರ ಬಿಂದ್ರಾನ್ ವಾಲೆಯ ಆರಾಧಕ ಇಷ್ಟು ಸಾಕಲ್ವಾ...

ಏನ್ ಮಾಡಿದ್ದಾರೋ ಏನ್ ಕಥ್ಯೋ?
ಅವ್ರೂ ಹೇಳ್ತಿಲ್ಲ ಪೊಲೀಸ್ರೂ ಬಾಯಿ ಬಿಡ್ತಿಲ್ಲ.
ಹೋಗಿ ಕೇಳೋಣವೆಂದರೆ ಅಗ್ನಿ ಐಪಿಎಸ್ ಮೂವೀ ಸಾಯಿಕುಮಾರ್ ತರ ಮುಖ ಗಂಟಾಕೊಂಡ್ ಕಣ್ ಕೆಂಪ್ಮಾಡ್ಕೊಂಡ್ ಕುಳಿತುಬಿಟ್ಟಿದ್ದಾರೆ.
ಏನೇ ಕೇಳಿದರೂ ಅವರದ್ದೊಂದೇ ಉತ್ತರ,ನಿಮ್ಮನ್ನಿಲ್ಲಿ ಕರೆತಂದ ಪೊಲೀಸರೂ ಅವರ ಆಫೀಸರ್ರೂ ಬರಬೇಕು ಅವರಷ್ಟೇ ತಿಳಿಸೋಕ್ ಸಾಧ್ಯ.ಇವಿಷ್ಟೇ ಅವ್ರು ಉದುರಿಸೋ ಗಿಣಿಪಾಠದ ಅಣಿಮುತ್ತುಗಳು.....

ಆಗ ಸಮಯ ಸರಿಸುಮಾರು ಮಧ್ಯರಾತ್ರಿಯ ಎರಡೂ ನಲವತ್ತಾಗಿತ್ತು.
ಕರ್ಕಶವಾಗಿ ಸೌಂಡ್ ಮಾಡುತ್ತಾ ಜೀಪೊಂದು ಒಳಬಂತು, 
ಈ ಸಲ ಅದರಲ್ಲಿ ಇದ್ದದ್ದು ನಮ್ಮನ್ನು ಕರೆತಂದು ಬಿಟ್ಟುಹೋಗಿದ್ದ ಪೊಲೀಸು,ಆತ ಈಸಲ ಇನ್ನೆರಡು ಹುಡುಗರನ್ನು ಕರೆತಂದಿದ್ದ ಅವರೂ ಕಾಶ್ಮೀರಿಗಳೇ,ಬಾರಾಮುಲ ಮೂಲದವರಂತೆ ಹದಿನೆಂಟೋ ಹತ್ತೊಂಬತ್ತೋ ವಯಸ್ಸು.ಪಕ್ಕದ ಬನಿಹಾಲ್ ಸಮೀಪದ ಲಾಡ್ಜೊಂದರಲ್ಲಿದ್ದವರನ್ನು ಕರ್ಕೊಂಡ್ ಬಂದಿದ್ದಾನೆ ತನಿಖೆಗಾಗಿ.

ಬಂದವನೇ ಇಬ್ಬರನ್ನೂ ಅಂಡರ್ ವೇರೊಂದನ್ನು ಬಿಟ್ಟು ಎಲ್ಲವನ್ನೂ ಕಳಚುವಂತೆ ಆದೇಶಿಸಿ ತನಿಖೆ ಮೊದಲಿಟ್ಟುಕೊಂಡುಬಿಟ್ಟ.ಮಾತಾಡ್ತಿದ್ದದ್ದು ಕಾಶ್ಮೀರಿಯಲ್ಲಾದ್ದರಿಂದ ಒಂದೂ ತಿಳಿಯುತ್ತಿತಿಲ್ಲವಾದರೂ,
ಮಾತಿಗೊಮ್ಮೆ ಬಾರಿಸುತ್ತಿರೋದೂ ಅವ್ರಿಬ್ರೂ ಕುಯ್ಯೋ ಮರ್ರೋ ಅಂತ ಕಿರುಚುತ್ತಿರೋದಂತೂ ನಮ್ ಅರಿವಿಗೆ ಬರುತ್ತಿತ್ತು.
ಸುಸ್ತಾಗಿರಬೇಕೇನೋ ಪಾಪಾ ಆ ಪೊಲೀಸಪ್ಪನಿಗೆ,
ಉಸಿರು ಬಿಡುತ್ತಾ ಹೊರಬಂದವನೇ ಯಾರಿಗೋ ಕರೆಮಾಡಿ ಏನೋ ತಿಳಿಸುತ್ತಾ ಹೊರಟೇಬಿಟ್ಟ,
ಮತ್ತೊಮ್ಮೆ ನಿರೀಕ್ಷೆಯ ಬಲೂನು ಪುಸ್ ಎಂದಿತ್ತು.....

ಬೆಳಗಿನ ಜಾವ ನಾಲ್ಕು ಗಂಟೆ,
ನೀರವ ಮೌನವೇ ಉಂಬಿಕೊಂಡಂತಾಗಿ ನಿಶ್ಯಬ್ಧವಾಗಿದ್ದ ಸ್ಟೇಷನ್ನು ಮೈ ಕೊಡವಿಕೊಳ್ಳುವಂತೆ ಕರ್ಕಶ ಶಬ್ಧ ಮಾಡುತ್ತಾ ಮೂರ್ನಾಲ್ಕು ಜೀಪುಗಳು ಜೊತೆಗೊಂದು ಕಾರು ಅದರೊಳಗೆ ನಾವು ಕಾಯ್ತಿದ್ದ ಆಫೀಸರ್ರು ಆಗಮಿಸಿದ್ದ,ಆತನೂ ಜೊತೆಗೊಂದು ನಾಲ್ಕು ಜನರನ್ನು ಕರೆತಂದಿದ್ದ.ಎಲ್ಲಾ ಸ್ಥಳೀಯ ಜನರೇ ಅನ್ಸುತ್ತೆ ಯಾಕೆಂದರೆ ಎಲ್ಲರೂ "ಫೆರಾನ್" (ಕಾಶ್ಮೀರೀ ಟ್ರೆಡಿಶನಲ್ ಓವರ್ ಕೋಟು) ತೊಟ್ಟಿದ್ರು....

ಬಂದವನೇ ಒಮ್ಮೆ ನಮ್ಮನ್ನು ನೋಡಿದವನು,
ಅಲ್ಲಿದ್ದ ಸೆಂಟ್ರೀ ಬಳಿ ಏನೋ ಮಾತನಾಡಿ,ಅವರು ನಮ್ಮ ಬಗ್ಗೆ ಬರೆದಿಟ್ಟಿದ್ದ ವರದಿಯಿರಬೇಕು ಅದನ್ನು ಓದಿಕಳ್ಳುತ್ತೇ ಸೀದಾ ಒಳಗೆ ಹೋದದ್ದಷ್ಟೇ....ಆಗ ಶುರುವಾಯ್ತು ನೋಡಿ ಒಂದೇ ಸಮನೆ ಕಿರುಚಾಟಗಳು ಅರಚಾಟಗಳು ಬಡಿಯುತ್ತಿರೋ ಸದ್ದುಗಳು ಅಲ್ಲಿ ಬಾರಿಸುತ್ತಿದ್ರೆ ಇಲ್ಲಿ ಮೈ ಝುಮ್ ಅನ್ನೋಕ್ ಶುರುವಾಗಿತ್ತು.
ಅದಕ್ಕಿಂತಾ ಟಾರ್ಚರ್ ಅಂದ್ರೆ ನಮ್ ಮೌಲಾನಂದು.
ಈ ಯಪ್ಪ ಸುಮ್ನೆ ಕೂರದೆ,ಹೇಳಿಲ್ವಾ ನಾನು ನೀವೇ ನೋಡ್ತಿದೀರಲ್ಲ ಪೊಲೀಸರ ದೌರ್ಜನ್ಯ ಅತ್ಯಾಚಾರಗಳನ್ನು,ಇದೇನೂ ಅಲ್ಲ ಸೇನೆಯವರ ಹಿಂಸಾಚಾರದ ಮುಂದೆ,ನರಕ ಸೃಷ್ಟಿಸಿದ್ದಾರೆ ನಮ್ಮ ಕಾಶ್ಮೀರವೆಂಬ ಸ್ವರ್ಗದಲ್ಲಿ,ಪ್ರತ್ಯೇಕ ಆಗೋದೊಂದೇ ದಾರಿ,ಇನ್ನಾದರೂ ನಮ್ಮ ನಾಡನ್ನು ನಮಗೊಪ್ಪಿಸಿ ತೆಪ್ಪಗಿರಬೇಕು ಸೇನೆ ಹಾಗೂ ಭಾರತ ಸರ್ಕಾರ ಅಂತ ಜುಮ್ಮಾಕೀ ಬಯಾನ್ ಶುರು ಹಚ್ಕೊಂಡ್ ಬಿಟ್ಟಿದ್ದಾನೆ ಈ ಸರಿಹೊತ್ತಲ್ಲೂ....

ಅಂತೂ ಹೊರ ಬಂದ ಆಫೀಸರ್ರು,
ಆಗ ಐದು ಗಂಟೆ ಹತ್ತು ನಿಮಿಷ ತೋರಿಸ್ತಿತ್ತು ಗಡಿಯಾರ,ಏನಾದ್ರೂ ಮಾತನಾಡಿ ಬಗೆಹರಿಸಿಕೊಳ್ಳೋಣ ಅಂತೆನ್ನಿಸಿ ಎದ್ದು ನಿಲ್ಲೋ ಮೊದಲೇ ಅಲ್ಲಿದ್ದ ಸೆಂಟ್ರಿಗೇನೋ ಹೇಳಿ ಹೊರಟೇ ಬಿಟ್ಟಿದ್ದ ಆಸಾಮಿ ಕಾರನ್ನೇರಿ.ಅಯ್ಯೋ ದೇವ್ರೇ,
ರಾತ್ರಿ ಹೋಗಿ ಹಗಲೂ ಇಲ್ಲೇ ನಮ್ ಕ್ಯಾಂಪ್ ಆಗೋ ಹಾಗ್ ಕಾಣ್ತಿದ್ಯಲ್ಲ ಅಂದ್ಕೊಳೋ ಟೈಮಿಗ್ ಸರ್ಯಾಗಿ ಸೆಂಟ್ರೀ ಬಂದವನೇ,
ಎಲ್ಲಾ ಕ್ಲಿಯರ್ ಆಗಿದೆ
ನಿಮ್ ನಂಬರ್ರೂ ಪರ್ಮನೆಂಟ್ ಅಡ್ರೆಸ್ಸೂ ನೀಡಿ ಹೊರಡಬಹುದು ಅಂತಂದ,
ಆಗ ಬಂತೂ ನೋಡಿ
ಗಂಟೆಗಳಿಂದ ಎದೆಯೊಳಗೆ ಅದುಮಿ ಕುಳಿತಿದ್ದ ಉಸಿರು ಆಚೆಗೆ.
ಉಸ್ಸಪ್ಪಾ..‌‌...
ಅಂತೂ ಇಂತೂ ಎಲ್ಲಾ ಫಾರ್ಮಾಲಿಟೀಸ್ ಮುಗಿಸಿ ಹೊರ ಬಂದಾಗ ಸರಿಯಾಗಿ ಬೆಳಗಿನ ಆರುಗಂಟೆ ಮೂವತ್ತೈದು ನಿಮಿಷ.

ವಿಷ್ಯ ಏನಂದ್ರೆ,
ಅವತ್ತು ರಾತ್ರಿ ನಾವು ರಾಮ್ ಬನ್ ಚೆಕ್ ಪೋಸ್ಟ್ ರೀಚಾಗೋ ಕೆಲ ಸಮಯದ ಹಿಂದಷ್ಟೇ ವ್ಯಕ್ತಿಯೊಬ್ಬನ ಹತ್ಯೆಯಾಗಿದೆ ಊರಿನಲ್ಲಿ.ಆತ ಯಾರೋ ಪ್ರಮುಖ ಪಕ್ಷವೊಂದರ ಮುಖಂಡ,ಆ ಕಾರಣಕ್ಕಾಗಿ ತನಿಖೆ ಬಿರುಸಾಗಿದೆ.ಪ್ರತ್ಯಕ್ಷ ದರ್ಶಿಯೊಬ್ಬನ ಪ್ರಕಾರ ಎರಡ್ಮೂರು ಜನರಿದ್ರು ಲೋಕಲ್ ಜನ ಅದರಲ್ಲೊಬ್ಬ ಗಡ್ಡಧಾರಿ ವಯಸ್ಸು ಸುಮಾರು ಮೂವತ್ತೈದರಿಂದ ನಲವತ್ತು ಕಪ್ಪು ಜ್ಯಾಕೆಟ್ ಧರಿಸಿದ್ದ.ನಮ್ ಗ್ರಹಚಾರಕ್ಕೆ ಗಾಡೀಲಿ ಎರಡು ಲೋಕಲ್ ವ್ಯಕ್ತಿಗಳಿದ್ರು ಅವರ ಹೋಲಿಕೆ ಹಾಗೂ ವಯಸ್ಸು ಪ್ರತ್ಯಕ್ಷದರ್ಶಿಯ ಹೇಳಿಕೆಗೆ ಹೋಲಿಕೆಯಾಗ್ತಿತ್ತು ಕಪ್ಪು ಜಾಕೆಟ್ ಬೇರೆ ಇತ್ತು ಇಷ್ಟು ಸಾಕಿತ್ತು ಆ ತಕ್ಷಣಕ್ಕೆ ಏನಾದರೂ ಮಾಡಿದ್ದೇವಂತ ತೋರಿಸಬೇಕಿತ್ತು ಅನುಮಾನಾಸ್ಪದವಾಗಿ ಕಂಡವರನ್ನೆಲ್ಲಾ ಕರೆತಂದು ಗುಡ್ಡೆ ಹಾಕುತ್ತಿದ್ದಾಗ ಸಿಕ್ಕ ನಮ್ಮನ್ನೂ ಏನೋ ಸಾಧಿಸಿದವರಂತೆ ಹಿಡಿದು ಕೂರಿಸಿಕೊಂಡಿದ್ದಾರೆ.....

ಕೊನೆಗೂ ಆ ಹುಡುಗರೂ ಆಫೀಸರ್ ಕರೆತಂದಿದ್ನಲ್ಲ ಲೋಕಲ್ ಜನರು,ಅವ್ರೂ ಸತ್ಯ ಬಾಯ್ ಬಿಟ್ಟಿದ್ರಿಂದಾಗಿ‌ ಎಲ್ಲವೂ ಸ್ಪಷ್ಟವಾಗಿದೆ,ಯಾರು ಎತ್ತ ಎಂಬುದರ ಜೊತೆಗೇ ಆರೋಪಿಗಳ ವಿವರಗಳೂ ಈಗೆಲ್ಲಿ ತೆರಳಿರಬಹುದೆಂಬ ಮಾಹಿತಿಯೂ ಸೇರಿ....

ಅಂತೂ ಒಂದಿಡೀ ರಾತ್ರಿ 
ಏನೇನೋ ಊಹೆಯಲ್ಲಿ,ಏನಾಗಿರಬಹುದೆಂಬ ಗೊಂದಲದಲ್ಲಿ,ಮುಂದೇನಾಗಬಹುದು ಎಂಬುದೇ ಗೊತ್ತಿರದ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊರೆಯೋ ಎರಡು ಡಿಗ್ರೀ ಛಳಿಯಲ್ಲಿ ರಾಮ್ ಬನ್ ಪೊಲೀಸ್ ಸ್ಟೇಷನ್ ಬೆಂಚ್ ಬಿಸಿಮಾಡಿ ಸೂರ್ಯೋದಯದ ಸಮಯಕ್ಕೆ ನಿರಾಳವಾಗಿ ಹೊರಬರೋ ಮುಖಾಂತರ
ಈ ಪ್ರಕರಣಕ್ಕೊಂದು ಸುಖಾಂತ್ಯದ ಇತಿಶ್ರೀ ಹಾಡಲಾಯ್ತು.

:- ಸುಧೀರ್ ಸಾಗರ್.



ಕಾಶ್ಮೀರ ಕಣಿವೆಯಲ್ಲೊಂದು ಕರಾಳ ರಾತ್ರಿ.
 (ಭಾಗ ಎರಡು)

ಸಮಯ ಮಧ್ಯರಾತ್ರಿ ಹನ್ನೆರಡಿರಬಹುದು,
ಆಗ ಬಂತು ನೋಡಿ 
ರಾಮಬನ ಜಿಲ್ಲಾ ಸರಹದ್ದಿನಲ್ಲಿರೋ ಪೊಲೀಸ್ ಚೆಕ್ ಪೋಸ್ಟ್.

ಸ್ವಾಭಾವಿಕವಾಗಿ,
ಇಲ್ಲಿಂದ ಕಾಶ್ಮೀರದತ್ತ ಸಾಗೋ ಪ್ರತಿಯೊಂದು ಗಾಡಿಯನ್ನೂ ಈ ಚೆಕ್ ಪೋಸ್ಟಿನಲ್ಲಿ ತಡೆದು,ಪ್ರಯಾಣಿಸೋ ಪ್ರತಿಯೊಬ್ಬರ ಐಡಿ ಕಾರ್ಡುಗಳನ್ನು ಚೆಕ್ ಮಾಡಿ ಊರು ವಿಳಾಸ ವಿಚಾರಿಸಿ ಕಳಿಸೋದು ರೂಢಿ....

ಅವತ್ತೂ ಎಂದಿನಂತೆ ಅದೇ ನಡೆಯುತ್ತಿತ್ತು ಅಲ್ಲಿ,ನಮ್ಮ ಸರದಿ ಬಂದಾಗಲೂ ಅದೇ ನಡೆದದ್ದು,ನಮ್ಮೆಲ್ಲಾ ಪೂರ್ವಾಪರ ವಿಚಾರಿಸಿ ಐಡಿ ಕಾರ್ಡುಗಳನ್ನು ಪರಿಶೀಲಿಸಲಾಯ್ತು.

ಸರಿ ಇನ್ನು ಹೊರಡಬೇಕು.
ಆದರೆ ಹೊರಗಿಳಿದು ಗಾಡಿ ಡಾಕ್ಯುಮೆಂಟ್ ತೋರಿಸಲು ತೆರಳಿದ್ದ ಡ್ರೈವರ್ ಬರೋ ಸೂಚನೆಯೇ ಕಾಣುತ್ತಿಲ್ಲ,

ಎಷ್ಟೋ ಹೊತ್ತಿನ ನಂತರ ಬಂದವನು ಏನೇನೋ ಬಡಬಡಾಯಿಸುತ್ತಾ ಮತ್ತೆ ಇನ್ನೇನೋ ತೆಗೆದುಕೊಂಡು ಅತ್ತ ಹೋದ ಆಸಾಮಿ ಮಾತ್ರ ನಾಪತ್ತೆ....

ಈ ಬಾರಿ ಮರಳಿದವನ ಜೊತೆ ಒಂದೆರಡು ಪೊಲೀಸರೂ ಇದ್ರು,
ಮತ್ತೊಮ್ಮೆ ಐಡಿ ಕಾರ್ಡುಗಳ ಪರಿಶೀಲನೆಯಾಗಿ ಯಾರು ಎತ್ತ ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡದ್ದಾಯ್ತು.

ಪ್ರಯಾಣದ ಸಂಪೂರ್ಣ ವಿವರ ಕೇಳಿ ತಿಳಿದುಕೊಂಡು ಅದಕ್ಕೆ ಪೂರಕವಾದ ಡಾಕ್ಯುಮೆಂಟ್ ಸಾಕ್ಷಿಗಳನ್ನೂ ಪರಿಶೀಲಿಸಿದ್ದಾಯ್ತು.

ಇನ್ನೂ ಸಮಾಧಾನವಾದಂತೆ ಕಾಣುತ್ತಿಲ್ಲ. ಕೊನೆಯದಾಗಿ ವಯಸ್ಸಿನ ಮಾಹಿತಿಯನ್ನು(ಇದನ್ನು ಆ ಕಾಶ್ಮೀರಿಗಳಿಗೆ ಮೂರ್ನಾಲ್ಕು ಸಲ ಬೇರೆ ಬೇರೆ ಪೊಲೀಸರು ಕೇಳಿದ್ರು ಈ ಮೊದಲೇ) ತೆಗೆದುಕೊಂಡು ಹೊರಟು ಹೋದವರು ದೂರದಲ್ಲಿ ಗುಂಪಾಗಿ ಪಿಸುಪಿಸು ಚರ್ಚೆ ಶುರುವಾಯ್ತು,

ತುಂಬಾ ಹೊತ್ತು ನಡೆದ ಬಿಸಿಚರ್ಚೆಯ ನಂತರ ಮತ್ಯಾರಿಗೋ ಪೋನಾಯಿಸಿದವರೇ ಸೀದಾ ಬಂದಿದ್ದು ನಮ್ ಗಾಡಿಯ ಬಳಿ.

ಬಂದವರೇ ಆ ಇಬ್ಬರೂ ಕಾಶ್ಮೀರಿಗಳನ್ನು ಹೊರ ಕರೆದು ಒಂದಿಷ್ಟು ಪ್ರಶ್ನೆ ಕೇಳಿ ಕೈ ಎತ್ತಿ ಮೊಣಕಾಲೂರಿ ಕುಳಿತುಕೊಳ್ಳಲು ತಿಳಿಸಿ ತಪಾಸಣೆ ನಡೆಸಲು ಮೊದಲಾದರು.

ಸರಿ ಅದೂ ಆಯ್ತು ನಂತರ ಅವರಿಬ್ಬರ ಬ್ಯಾಗ್ ಚೆಕ್ ಮಾಡಬೇಕು ಅಂತಾಯ್ತು,ಅದನ್ನೂ ಕೋಳಿ ಕೆದಕಿದಂತೆ ರಸ್ತೆಯ ತುಂಬೆಲ್ಲಾ ಹರಡಿ ನಮಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ಹೊರಟು ಹೋಗಿದ್ದಾಯ್ತು.

ಬಿಡು ಏನ್ ಮಹಾ ತಪಾಸಣೆ,ಆಯ್ತಲ್ಲ ಎಲ್ಲಾ ಸಂಭ್ರಮ ಈಗಲಾದ್ರೂ ಹೊರಡಬಹುದೇನೋ ಅಂದ್ಕೊಂಡು ಎಲ್ಲರೂ ಕೈ ಜೋಡಿಸಿ ಮೊದಲಿನಂತೆ 
ಬ್ಯಾಗ್ ಪ್ಯಾಕ್ ಮಾಡಿ ಡ್ರೈವರ್ ಗಾಗಿ ಎದುರು ನೋಡುತ್ತಿದ್ರೆ....

ಕಾರಿನ ಬಳಿ ಬಂದ ಪೊಲೀಸರು ಯಾರೊಂದಿಗೋ ಫೋನ್ ಲೈನಿನಲ್ಲಿದ್ದುಕೊಂಡೇ ಅದೇನೋ ಅರಿಯದ ಭಾಷೆಯಲ್ಲಿ ಮಾತನಾಡುತ್ತಾ ಬಳಿಬಂದು...

ಮತ್ತೊಮ್ಮೆ ಅವರಿಬ್ಬರ ವಿಳಾಸ ಹಾಗೂ ವಯಸ್ಸನ್ನು ಕೇಳಿ ಆ ಕಡೆಯವರಿಗೆ ತಿಳಿಸಿ ಮತ್ತೊಂದು ಪ್ರಶ್ನೆ ಕೇಳಿದ್ದು "ನಿಮ್ ಬಳಿ ಕಪ್ಪು ಜಾಕೆಟ್ ಇದ್ಯಾ" ಎಂದು.

ನಮ್ ಡ್ರೈವರ್ ಕೈ ಎತ್ತಿದ್ದ "ನನ್ ಹತ್ರ ಒಂದಿದೆ ಬ್ಲಾಕ್ ಕಲರ್ ಜಾಕೆಟ್".

ಆಗ ನೋಡ್ಬೇಕಿತ್ತು ನೀವು,
ಆ ಪೊಲೀಸರ ಮುಖವನ್ನು....
ನಾಗವಲ್ಲಿಯ ರಹಸ್ಯ ಬೇಧಿಸಿದ ಕ್ಷಣದಲ್ಲಿ ವಿಷ್ಣುವರ್ಧನ್ ಮುಖದಲ್ಲಿತ್ತಲ್ಲ ಡಿಟ್ಟೋ ಸೇಮ್ ಟು ಸೇಮ್ ವಿಲಕ್ಷಣ ನಗು ಏನೋ ಸಾಧಿಸಿದ ಹೆಮ್ಮೆ ತಾಂಡವವಾಡುತ್ತಿತ್ತು.

ಜಾಕೆಟ್ ಇದೆ ಅಂದಿದ್ದೇ ತಡ, ಮೊದಲಾಯ್ತು ನೋಡಿ ಪೊಲೀಸರ ಗುಂಪೊಳಗೆ ಸಂಚಲನ,

ಯಾರ್ಯಾರಿಗೋ ಫೋನ್ ಮಾಡ್ತಿದ್ದಾರೆ ಇನ್ಯಾರಿಂದಲೋ ಫೋನುಗಳು ಬರುತ್ತಿವೆ ಅತ್ತಿಂದಿತ್ತ ಓಡಾಡುತ್ತಿದ್ದಾರೆ,

ನಮಗೇ ಗೊತ್ತಾಗದಂತೆ ಇಬ್ಬರು ಗನ್ ಧಾರಿ ಪೊಲೀಸರು ಕಾರಿನ ಎರಡೂ ಬದಿ ಡೋರ್ ಬಳಿ ಪಹರೆಗೂ ನಿಂತಾಗಿದೆ.

ಆದರೆ‌ ಮ್ಯಾಟ್ರು ಏನಂತ ಯಾರೂ ಹೇಳೋಕ್ ರೆಡಿಯಿಲ್ಲ ಕೇಳಿದರೂ ಕಣ್ಣಲ್ಲೇ ಸುಟ್ಟುಬಿಡೋ ದುರುದುರು ಲುಕ್ಕು.....

ಕೊನೆಗೂ ಬಳಿಬಂದ ಪೊಲೀಸನೊಬ್ಬ ಡ್ರೈವರನ್ನು ಕರೆದವನೇ ಗಾಡಿ ಸ್ಟಾರ್ಟ್ ಮಾಡಿ ಹೊರಡು ಎಂದಾಗ ಅಬ್ಬಾ ಮುಗೀತಲ್ಲ ಎಂಬ ನಿರಾಳಭಾವ ಎಲ್ಲರ ಮುಖದಲ್ಲೂ.

ಅದು ಇದ್ದದ್ದು ಮಾತ್ರ ಎರಡೇ ಸೆಕೆಂಡ್, ಯಾಕಂದರೆ ಆತನೂ ಕಾರಿನ ಒಳಸೇರಿಕೊಂಡವನೇ ಕಾರನ್ನು ತಿರುಗಿಸಲು ಹೇಳಿದ್ದು ರಾಮ್ ಬನ್ ಪೊಲೀಸ್ ಸ್ಟೇಷನ್ ಕಡೆಗೆ....

ಹೋಗಿ ಗಾಡಿಯಿನ್ನೂ ನಿಂತಿಲ್ಲ ಆಗಲೇ ಗನ್ ಮ್ಯಾನುಗಳು ಕಾರಿನ ಸುತ್ತಾ ನೆರೆದಾಗಿತ್ತು,ನಾವು ಕೆಳಗಿಳಿದು ನೆಡೆಯುತ್ತಿದ್ರೆ ಆಳಿಗೊಂದರಂತೆ ಬಂದೂಕುಧಾರಿ ಪೊಲೀಸರು ಹಿಂಬಾಲಿಸುತ್ತಿದ್ದಾರೆ.

ಒಳ ಬಂದು ಬಿಲ್ಡಿಂಗಿನ ಮೂಲೆಯಲ್ಲಿದ್ದ ಬೆಂಚ್ ಬಿಸಿ ಮಾಡುತ್ತಾ ಮುಂದೇನು ಅನ್ನೋದೇ ಅರಿವಿಲ್ಲದೆ ಕೂತಿದ್ರೆ ಆಕಡೆ ಒಳಗೆ ಕುಳಿತಿದ್ದ ಪೊಲೀಸಪ್ಪನೊಂದಿಗೆ ನಮ್ಮ ಬಗ್ಗೆ ವಿವರ ನೀಡಿ ವರದಿ ಒಪ್ಪಿಸಿ ಹೊರಟು ಬಿಟ್ಟಿದ್ದ ನಮ್ಮನ್ನು ಕರೆತಂದ ಪೊಲೀಸು.....

ಈಗ ಮಾತ್ರ ನಂಗೆ ಎಡಗಣ್ಣು ಹಾರೋಕ್ ಶುರುವಾಯ್ತು,ಯಾಕೋ ಎಲ್ಲೋ ಮಿಸ್ ಹೊಡೀತಿದೆ,ಇದ್ಯಾಕೋ ಇಷ್ಟಕ್ಕೇ ಮುಗಿಯೋ ಹಾಗೆ ಕಾಣಿಸ್ತಿಲ್ಲ ಏನೋ ದೊಡ್ಡದು ಎದುರು ನೋಡ್ತಿದೆ ಅನ್ಸೋಕ್ ಶುರುವಾಗಿದ್ದು ಈಗಲೇ.

ಯಾಕೆಂದರೆ ಅತ್ತ ನಮ್ ಗಾಡಿಯನ್ನು ಕಾಯೋಕಂತಾನೇ ಒಬ್ಬ ಗನ್ ಮ್ಯಾನ್ ನಿಯೋಜಿಸಲಾಗಿದ್ರೆ,ಇತ್ತ ನಮ್ಮ ಸುತ್ತಲೂ ಬಿಗಿ ಭದ್ರತೆ.ಇಡೀ ಸ್ಟೇಷನ್ ಸಿಬ್ಬಂದಿಯೇ ನಮ್ಮ ಸುತ್ತ ತಮ್ಮ ಚಿತ್ತವನ್ನು ಕೇಂದ್ರೀಕರಿಸಿಬಿಟ್ಟಿದ್ದರು....

ಈಗ ಶುರು ಹಚ್ಚಿಕೊಂಡ್ರು ನೋಡಿ ಸ್ಟೇಷನ್ ಸಿಬ್ಬಂದಿ ತಮ್ಮ ವರಸೆ.ನಿಮ್ಮ ಮೊಬೈಲ್ ಪರ್ಸು ವಾಚು ಸರ ಉಂಗುರ ಇತ್ಯಾದಿಗಳನ್ನು ಈ ಟ್ರೇ ಒಳಗೆ ಹಾಕಿಬಿಡೀ ಮೈ ಮೇಲಿನ ಬಟ್ಟೆ ಹೊರತುಪಡಿಸಿ ಇನ್ಯಾವುದೇ ವಸ್ತು ನಿಮ್ಮಲ್ಲಿದ್ರೂ ಕೂಡಾ ಪರಿಸ್ಥಿತಿ ಈಗಿನಂತಿರೋದಿಲ್ಲ.

ಅಲ್ಲಿ ಕಾಣ್ತಿದ್ಯಲ್ಲ ಆ ಬೆಂಚ್ ಮುಂದಿನ ಆದೇಶ ಬರೋವರೆಗೂ ಅಲ್ಲಿಂದ ಮಿಸುಕಾಡುವಂತಿಲ್ಲ ಎಂಬುದರೊಂದಿಗೆ ನೀವು ನಮ್ಮ ಬಂಧನದಲ್ಲಿದ್ದೀರೀ ಎಂಬುದನ್ನು ಸೂಕ್ಷ್ಮವಾಗಿಯೇ ಹೇಳಿ ಬಿಟ್ಟಿದ್ದ ಆ ಆರುವರೆ ಅಡಿಯ ಕಾಶ್ಮೀರೀ ಪೊಲೀಸ್.

ನಿಮ್ಗೆ ಗೊತ್ತಾ ಮೂತ್ರಖಾನೆಗೆ ಹೋಗಬೇಕಾದ್ರೂ ಜೊತೆಗೊಬ್ಬ ಗನ್ ಮ್ಯಾನ್ ಹಿಂಬಾಲಿಸುತ್ತಿದ್ದ ಅಂದ್ರೆ ಊಹಿಸಿಕೊಳ್ಳಿ ಹೇಗಿರಬಹುದು ಆಗಿನ ಸ್ಥಿತಿ....

ಆಗ ಸಮಯ ಮಧ್ಯರಾತ್ರಿ ಎರಡಿರಬೇಕು.
ನಾನು ಏನೆಂಬ ಏನೂ ಅರಿವಿರದೆ ಬೆಂಚು ಕಾಯಿಸುತ್ತಾ ಆಕಾಶ ದಿಟ್ಟಿಸುತ್ತಿದ್ದೆ.

ಕಿಲೋಮೀಟರುಗಟ್ಟಲೆ ಹಾವು ದಾರಿಯಲ್ಲಿ ಸಾಗಿದ ನಂತರ ಸಿಗುವ ಪರ್ವತವೊಂದರ ತುತ್ತತುದಿಯಲ್ಲಿ ಮೈಚಾಚಿರೋ ಏಕಾಂಗಿ ಪೊಲೀಸ್ ಸ್ಟೇಷನ್ ಅದು..‌‌‌....

(ಮುಂದುವರಿಯುವುದು)



"ಕಾಶ್ಮೀರ ಕಣಿವೆಯಲ್ಲೊಂದು ಕರಾಳ ರಾತ್ರಿ"
(ಭಾಗ ಒಂದು)

ಸಂಜೆ ಐದೂವರೆಯಾಗಿತ್ತು,
ಎಲ್ಲವೂ ದೊಡ್ ಝೈಲೋ,ಟವೇರಾ ಸುಮೋ ತರಹದ ವಾಹನಗಳೇ.
ಕನಿಷ್ಟ ಹತ್ತು ಜನರಾದರೂ ಆಗದೆ ಗಾಡಿ ಸ್ಟಾರ್ಟ್ ಮಾಡೋ ಜಾಯಮಾನವೇ ಅವರದ್ದಲ್ಲ,ಅವತ್ಯಾಕೋ ಜನರೇ ಇರ್ಲಿಲ್ಲ. ಹೊರಡಬೇಕಿದ್ದ ಎರಡು ಗಾಡಿಗಳಲ್ಲೂ ಬರೀ ಮೂರ್ನಾಲ್ಕು ಜನರಷ್ಟೇ ಕುಳಿತಿದ್ದಾರೆ....

ಅದು ಜಮ್ಮುವಿನ ಹೃದಯ ಭಾಗದಲ್ಲಿರೋ ಶಾಲೀಮಾರ್ ರಸ್ತೆಯ ಟ್ಯಾಕ್ಸೀ ನಿಲ್ದಾಣ.ಜಮ್ಮುವಿನಿಂದ ಶ್ರೀನಗರಕ್ಕೆ ಹೋಗಬೇಕಿದ್ದಲ್ಲಿ ಇರೋದೇ ಎರಡು ಆಯ್ಕೆಗಳು ಒಂದೋ ಹತ್ತರಿಂದ ಹನ್ನೆರಡು ಗಂಟೆಗಳ ಪ್ರಯಾಸದಾಯಕ ಬಸ್ ಪ್ರಯಾಣ ಅಥವಾ ಆರರಿಂದ ಎಂಟು ಗಂಟೆಗಳ ಆರಾಮದಾಯಕವಲ್ಲದಿದ್ದರೂ ಕಡಿಮೆ ಪ್ರಯಾಸದ ಟ್ಯಾಕ್ಸಿ ಪ್ರಯಾಣ.

ಬಸ್ಸು ಹಗಲಲ್ಲಷ್ಟೇ ಸೂಕ್ತ, ರಾತ್ರಿ ಮಹಾ ಭಯಾನಕ.ಕಡಿದಾದ ಕಣಿವೆಯ ರಸ್ತೆಯಲ್ಲಿ ಹಗಲು ಸಾಗೋದೇ ಸಾವಿನೊಂದಿಗೆ ಸರಸ ಇನ್ನು ರಾತ್ರಿಯೆಂದರೆ ಕೇಳಬೇಕಾ?
ಟ್ಯಾಕ್ಸಿ ಹಿಡಿಯೋಣವೆಂದರೆ ಅದೂ ಹೊರಡೋಕೆ ಜನರಿಲ್ಲದೆ ಪರದಾಡುತ್ತಿತ್ತು...

ಆಗ ಸಿಕ್ಕವ್ನೇ ಅರ್ಜಿತ್ ಮಾನ್,
ಈತ ಜಲಂಧರ್ ಮೂಲದ ಸಧ್ಯ ಜಮ್ಮುವಿನಲ್ಲಿ ನೆಲೆಸಿರೋ ಟ್ಯಾಕ್ಸಿ ಡ್ರೈವರ್.
ವಿಚಾರಿಸುತ್ತಿದ್ದುದನ್ನು ನೋಡಿರಬೇಕು ಬಳಿ ಬಂದವನೆ ಪಾಜೀ ಗಾಡಿ ರೆಡೀ ಇದೆ 
ಎರಡು ಜನ ಸಿಕ್ಕಿದಾರೆ ನೀವೂ ಬಂದ್ರೆ ಹೊರಟು ಬಿಡೋಣ ನಾಲ್ಕು ಜನ ಆಗ್ತೀರೀ ಸರಿಯಾಗುತ್ತೆ ಅಂದ.

ಅದು ಹೊಸಾ ಕಾರು ರಿಜಿಸ್ಟ್ರೇಷನ್ನೂ ಆಗಿಲ್ಲ ಜಮುವಿನಲ್ಲಿ ಖರೀದಿಸಿದ್ದಾನೆ ಶ್ರೀನಗರದ ವ್ಯಕ್ತಿಯೊಬ್ಬ,ಜಮ್ಮುವಿನಿಂದ ಅಲ್ಲಿಗ್ ತಗೊಂಡೋಗಿ ತಲುಪಿಸೋ ಕಾರ್ಯವನ್ನು ಟ್ರಾವೆಲ್ ಏಜನ್ಸಿಗೆ ವಹಿಸಿದ್ದಾರೆ,ಆತ ಖಾಲಿ ಗಾಡಿ ಕೊಂಡೊಯ್ಯೋ ಬದಲು ಗ್ಯಾಪಲ್ಲೇ ನಾಲ್ಕು ಸೀಟಾಕಿದ್ರೆ ಕಾಸಾಗುತ್ತೆ ಅಂತ ಡ್ರೈವರ್ ಸೆಟ್ ಮಾಡಿದ್ದಾನೆ ಆತ ನಮ್ಮನ್ನು ಹಿಡಿದವ್ನೆ....

ಜೊತೆಗಿದ್ದ ಇಬ್ಬರು ಸಹ ಪ್ರಯಾಣಿಕರೂ ಶ್ರೀನಗರದವರು.ಅದರಲ್ಲೊಬ್ಬ ಮೌಲಾನಾ ಅನ್ವರ್ ಖಾದ್ರೀ,ಈತನೂ ಮೂಲತಃ ಡ್ರೈವರ್ ಈಗ ಟಿಂಬರ್ ಕಂಟ್ರಾಕ್ಟ್ ಮಾಡ್ತಿದ್ದಾನೆ.ಇನ್ನೊಬ್ಬ ಇನಾಯತ್ ಭಟ್ ಇವರಿಬ್ಬರೂ ಪಾರ್ಟನರ್ಸ್.

ಅಂತೂ ಹೊರಟಿದ್ದಾಯ್ತು ಶ್ರೀನಗರದತ್ತ.
ಸ್ವಲ್ಪ ಹೊತ್ತಿನ ನೀರವ ಮೌನ ತೊಡೆದು ಮಾತುಕಥೆಯ ಬುತ್ತಿ ಬಿಚ್ಚಿ ತಿನ್ನಲು ಮೊದಲಾಗುತ್ತಿದ್ದಂತೆಯೇ ಪ್ರಾಥಮಿಕ ಉಭಯ ಕುಶಲೋಪರಿಯ ನಂತರ ಚರ್ಚೆ ಸಾಗಿದ್ದು ಪ್ರಸ್ತುತ ಕಾಶ್ಮೀರ ಕಣಿವೆಯ ಸ್ಥಿತಿಗತಿಗಳ ಬಗ್ಗೆ.
ಹೇಳೋದ್ ಮರೆತಿದ್ದೆ,ಇವರಿಬ್ಬರೂ ಪಕ್ಕಾ ಪ್ರತ್ಯೇಕತಾವಾದಿಗಳು,ಎಲ್ಲಾ ಕಾಶ್ಮೀರೀ ಮುಸ್ಲಿಮರಂತೆಯೇ ಇವರೂ ಭಾರತ ಕಾಶ್ಮೀರವನ್ನು ಅತಿಕ್ರಮಿಸಿಕೊಂಡು ಅನ್ಯಾಯ ಮಾಡ್ತಿದೆ ಎಂದು ನಂಬಿದವರು,ಭಾರತೀಯ ಸೇನೆ ನಮ್ಮ ಜೀವನವನ್ನೇ ಸರ್ವನಾಶ ಮಾಡಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ಭಾವಿಸಿ ಬದುಕುತ್ತಿರುವವರು.

ಒಂದೊಂದಾಗಿ ಸೇನೆಯ ಹಾಗೆಯೇ ಭಾರತ ಸರ್ಕಾರದ ಲೋಪದೋಷಗಳನ್ನೂ ವಿವರಿಸುತ್ತಾ,ಹೇಗೆಲ್ಲಾ ಪಾಕಿ ಸೇನೆಯ ಜೊತೆಗಿನ ಸುಳ್ಳು ಎನ್ ಕೌಂಟರ್ ಗಳನ್ನು ಹೆಣೆದು ಕಥೆ ಕಟ್ಟಲಾಗುತ್ತಿದೆ ಎಂಬುದರಿಂದ ಶುರುವಾಗಿ ಬುಹ್ರಾನ್ ವಾನಿ ಯೆಂಬ ಅಮಾಯಕ? ದೇಶಭಕ್ತನೊಬ್ಬನನ್ನು ಹೇಗೆಲ್ಲಾ ಭಯೋತ್ಪಾದಕನ ಪಟ್ಟದಲ್ಲಿ ಕೂರಿಸಲಾಯ್ತು ಎಂಬುದನ್ನೆಲ್ಲಾ ವಿವರವಾಗಿ ಹೇಳ್ತಾ ಹೋಗ್ತಿದ್ರೆ ಹೂಂ ಗುಟ್ಟುತ್ತಾ ಉಳಿತಿದ್ದೆ ನಾನು.
ಅದಕ್ಕೆ ಪೂರಕವೆಂಬಂತೆ ನಾನೂ ಆಗಾಗ ಒಂದೊಂದೇ ಪ್ರಶ್ನೆಗಳನ್ನು ಕೇಳುತ್ತಾ ಉತ್ತರ ಪಡೆದುಕೊಳ್ಳುತ್ತಾ ಅವರ ಮನಸ್ಥಿತಿಯ ಅನಾವರಣವಾಗಿಸುತ್ತಾ ಸಾಗುತ್ತಿದ್ದರೆ,ತನಗಿವೆಲ್ಲಾ ಸಂಬಂಧವೇ ಇಲ್ಲವೆಂಂತೆ ಒಂದೇ ಗತಿಯಲ್ಲಿ ಸಾಗುತ್ತಿತ್ತು ಹಾದಿ.
ತಮಾಷೆ ಎಂದರೆ ಆ ಸರ್ದಾರ್ಜಿ ಅರ್ಜಿತ್ ಮಾನ್ ಕೂಡಾ ಪಂಜಾಬ್ ಸೇರಿದಂತೆ ನಾಲ್ಕೈದು ರಾಜ್ಯಗಳು ಭಾರತದಿಂದ ಬೇರೆಯಾಗಿ ಪ್ರತ್ಯೇಕ ದೇಶವಾಗಬೇಕೆಂದು ಪ್ರತಿಪಾದಿಸೋ ಖಲಿಸ್ತಾನ ಮೂವ್ ಮೆಂಟಿನ ಅಭಿಮಾನಿ...

ಹೀಗೆ ಸಂಪೂರ್ಣ ಭಾರತವಿರೋಧಿ ಶಕ್ತಿಗಳ ನಡುವೆ ಎರಡು ಮುಗ್ಧ ಅಮಾಯಕ ಜೀವಗಳು ಕುಳಿತು,ಅವರು ಹೇಳುತ್ತಿರೋದೆಲ್ಲಾ ಸತ್ಯವೆಂದೇ ನಂಬುವಂತೆ ಪ್ರತಿಪಾದಿಸುತ್ತಿರೋದನ್ನು ಆಲಿಸುತ್ತಿರೋದೂ ಅಲ್ಲದೆ ಇತ್ತೀಚಿನ ಘಟನಾವಳಿಗಳ ಬಗ್ಗೆ,ಕೆಲವೊಂದು ಕಾಯ್ದೆಗಳ ನಿಷೇಧಿಸುವ ಬಗ್ಗೆ,ಸೇನೆ ಹಾಗೂ ಪೊಲೀಸ್ ಇಲಾಖೆಗಳ ದೌರ್ಜನ್ಯದ ಬಗ್ಗೆ ಮಾತನಾಡುತ್ತಾ ಹಲವಾರು ಉದಾಹರಣೆಗಳನ್ನು ಪ್ರಸ್ತುತ ಪಡಿಸುತ್ತಾ,ನಲವತ್ತೇಳರಿಂದ ಶುರುವಾಗಿ ಇತ್ತೀಚಿನ ಉರಿ ಅಟ್ಯಾಕ್ ವರೆಗಿನ ವಿವರಗಳಿಗೆ ಬರೋ ಸಮಯಕ್ಕೆ ಸರಿಯಾಗಿ,ಉಧಮ್ ಪುರ್ ದಾಟಿ ಮುಂದೆ ಪೀರಾ ಎಂಬ ಹಳ್ಳಿಯ ಹಳ್ಳಿಯ ಧಾಬಾವೊಂದರಲ್ಲಿ ಊಟಕ್ಕೆ ನಿಲ್ಲಿಸಿದ್ವೀ ಕಾರು....

ಕ್ರಿಕೆಟ್ ಮ್ಯಾಚ್ ನೆಡೆಯುತ್ತಿತ್ತು.
ಬಂದಿರೋ ಗಿರಾಕಿಗಳಿಗೆ ಏನ್ ಬೇಕು ಅಂತ ಕೇಳೋವ್ರೇ ಗತಿಯಿಲ್ಲ ಅಲ್ಲಿ,ಇಡೀ ಡಾಭಾವೇ ಭಾರತದ ಗೆಲುವಿಗಾಗಿ ಉಸಿರು ಬಿಗಿ ಹಿಡಿದು ತಟಸ್ಥವಾಗಿ ಕುಳಿತುಬಿಟ್ಟಿದೆ,ಇನ್ನೇನು ನಾಲ್ಕೋ ಐದೋ ಓವರ್ ಇತ್ತಷ್ಟೇ.

 ಅದು ಭಾರತ ಬಾಂಗ್ಲಾದೇಶ ನಡುವಿನ ಫೈನಲ್ ಕದನ.
ಸಂಪೂರ್ಣ ಸೋಲಿನತ್ತ ಪಾದವೂರಿದ್ದ ಭಾರತ ಕಾರ್ತಿಕ್ ಕಮಾಲಿನಿಂದಾಗಿ ಜಯದತ್ತ ಮಗ್ಗುಲು ಬದಲಿಸುತ್ತಿದ್ರೆ ಇತ್ತ ಆ ಕಾಶ್ಮೀರೀಗಳ ಮೊಗವ್ಯಾಕೋ ಹುಳಿ ತಿಂದ ಮಗುವೊಂದರ ಮುಖದಂತಾಗಲು ಮೊದಲಾಗಿತ್ತು.
ಬಾಂಗ್ಲಾ ಗೆಲುವಿಗೆ ಬೆಟ್ಟಿಂಗಿನಲ್ಲಿ ಹಣ ಹೂಡಿರುವುದೇ ನಮ್ಮೀ ನರಳಾಟಕ್ಕೆ ಕಾರಣವಷ್ಟೇ ಹೊರತು ಮತ್ತೇನಿಲ್ಲ ಎಂದು ಸಮರ್ಥನೆ ನೀಡಲು ಯತ್ನಿಸಿದರಾದ್ರೂ ಅದು ನಿಜವಲ್ಲ ಎಂಬುದು ಅವರಿಗೂ ಗೊತ್ತಿತ್ತು ನಮಗೂ ಅರಿವಾಗಿ ಬಹಳಕಾಲವಾಗಿತ್ತು.

ಭಾರತಕ್ಕೆ ರೋಚಕ ಜಯ.
ಡಾಭಾ ಮಾಲಿಕ ಎಲ್ಲರಿಗೂ ರಸಗುಲ್ಲ ಹಂಚುವ ಮೂಲಕ ಸಂಭ್ರಮಾಚರಣೆಗೊಂದು ತೆರೆ ಎಳೆಯುವುದರೊಂದಿಗೆ ನಮ್ಮ ಪಯಣ ಮತ್ತೆ ಶುರುವಾಯ್ತ....
ಅಂದುಕೊಂಡಂತೇ ಆದಲ್ಲಿ ಇನ್ನೊಂದು ಗಂಟೆಯಲ್ಲಿ ಶ್ರೀನಗರ.

ಸಮಯ ಮಧ್ಯರಾತ್ರಿ ಹನ್ನೆರಡಿರಬಹುದು,
ಆಗ ಬಂತು ನೋಡಿ 
ರಾಮಬನ್ ಜಿಲ್ಲಾ ಸರಹದ್ದಿನಲ್ಲಿರೋ ಪೊಲೀಸ್ ಚೆಕ್ ಪೋಸ್ಟ್.....

(ಮುಂದುವರಿಯುವುದು)

Saturday, June 16, 2018

       ******ಮೊಯಿರಾಂಗ್(Moirang) ******
ಸರೋವರದ ಮೇಲೊಂದು ತೇಲುವ ದ್ವೀಪಗಳ ವಿಸ್ಮಯ ನಗರಿ.


ಬ್ರಿಟಿಷರಿಂದ ಸ್ವತಂತ್ರಗೊಂಡ ಭಾರತದ ಮೊದಲ ಪ್ರಾಂತ್ಯ ಎಂಬ ಹಿರಿಮೆಯನ್ನು ಹೊಂದಿರೋ ಮಣಿಪುರ ರಾಜ್ಯದ ರಾಜಧಾನಿ ಇಂಫಾಲದಿಂದ NH 2 ರಲ್ಲಿ ಲಾಂಜೋತಾಂಬಾ,ನಾಂಬೋಲ್ ಮಾರ್ಗವಾಗಿ ಹೊರಟು 45ಕಿಮೀ ಸಾಗುತ್ತಿದ್ದಂತೆ ಸಿಗೋ ಬಿಷ್ಣುಪುರವೆಂಬ ಜಿಲ್ಲೆಗೆ ಸೇರಿದ ಪುಟ್ಟ ಊರು ಮೊಯಿರಾಂಗ್.ವರ್ಷಪೂರ್ತಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಾ ಮನಸ್ಸಿಗೆ ಮುದನೀಡೋದಷ್ಟೇ ಅಲ್ಲದೆ ಭಾರತರ ನೆಲದಲ್ಲಿ ಮೊಟ್ಟಮೊದಲು ತ್ರಿವರ್ಣ ಧ್ವಜಾರೋಹಣ ಮಾಡಲ್ಪಟ್ಟ ಪುಣ್ಯಭೂಮಿಯೆಂಬ ಹೆಮ್ಮೆಯ ನೆಲವಿದು.


ಪೂರ್ವೋತ್ತರ ರಾಜ್ಯಗಳಲ್ಲಿಯೇ ಅತ್ಯಂತ ದೊಡ್ಡ ಸರೋವರವೆಂಬ ಖ್ಯಾತಿಯ ಸಿಹಿನೀರಿನ ಸರೋವರ “ಲೋಕ್ಟಕ್ ಲೇಕ್” ಹಾಗೂ ಅದರ ಮೇಲ್ಮೈನಲ್ಲಿರೋ ತೇಲುವ ದ್ವೀಪಗಳೆಂಬ ಖ್ಯಾತಿಯ ದ್ವೀಪಸಮೂಹಗಳು,ಈ ದ್ವೀಪಗಳ ನಡುವಲ್ಲಿರೋ ಜಗತ್ತಿನಲ್ಲಿಯೇ ಏಕೈಕ ತೇಲುವ ರಾಷ್ಟ್ರೀಯ ಉದ್ಯಾನವನ ವೆಂಬ ಪ್ರಖ್ಯಾತವಾದ ಕೈಬುಲ್ ಲಾಮ್ಜಾವೋ ನ್ಯಾಶನಲ್ ಪಾರ್ಕ್,ಪ್ರತೀವರ್ಷ ಮೇ ಎರಡನೇ ವಾರದಿಂದ ತಿಂಗಳ ಕಾಲ ನಡೆಯೋ ಲೇ-ಹಾರೋಬಾ ಉತ್ಸವ ಹಾಗೂ ಭಾರತದ ನೆಲದಲ್ಲಿ ಮೊಟ್ಟಮೊದಲ ಬಾರಿ ನಮ್ಮ ತ್ರಿವರ್ಣ ಧ್ವಜಾರೋಹಣ ಮಾಡಲಾದ ನೆನಪಿಗಾಗಿ ನಿರ್ಮಾಣವಾಗಿರೋ ಸ್ಮಾರಕ ಇಲ್ಲಿನ ಪ್ರಮುಖ ಆಕರ್ಷಣೆ.


ಪ್ರೇಕ್ಷಣೀಯ ಸ್ಥಳಗಳು.

INA ವಾರ್ ಮೆಮೋರಿಯಲ್ ಮ್ಯೂಸಿಯಂ.
(INA War memorial museum)
ಎರಡನೇ ವಿಶ್ವಯುದ್ಧದ ಸಮಯದಲ್ಲಿ ನೇತಾಜಿಯ ಆಜಾ಼ದ್ ಹಿಂದ್ ಫೌಜಿ಼ನ ಕೇಂದ್ರಕಛೇರಿಯಾಗಿದ್ದ ಸ್ಥಳವಿದಾಗಿದ್ದು,ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಈ ಪ್ರಾಂತ್ಯ ಗೆಲ್ಲುವ ಮುಖಾಂತರ ಮಣಿಪುರ ರಾಜ್ಯ ಸಂಪೂರ್ಣವಾಗಿ ಸ್ವತಂತ್ರಗೊಂಡಿತ್ತು.ಈ ಅಂಗವಾಗಿ 1944ರ ಏಪ್ರಿಲ್ 14ರಂದು ತ್ರಿವರ್ಣ ಧ್ವಜಾರೋಹಣ ಮಾಡಲಾದ ಜಾಗವನ್ನು ಸಂರಕ್ಷಿಸಿ ಮ್ಯೂಸಿಯಂ ಮಾಡಲಾಗಿದ್ದು,ಇದು ಊರಿನ ಹೃದಯಭಾಗದಲ್ಲಿದೆ.ಇಲ್ಲಿ INA ಹಾಗೂ ನೇತಾಜಿಗೆ ಸಂಬಂಧಿಸಿದ ಅನೇಕ ವಸ್ತುಗಳು,ಚಿತ್ರಗಳು ಹಾಗೂ ಮಾಹಿತಿಗಳನ್ನು ಸಂಗ್ರಹಿಸಿಡಲಾಗಿದೆ.


ಲೋಕ್ಟಕ್ ಲೇಕ್.(Loktak Lake)
290 ಚದರ ಕಿಮೀ ವಿಸ್ತೀರ್ಣದಲ್ಲಿ 35ಕಿಮೀ ಉದ್ದ ಹಾಗೂ 13ಕಿಮೀ ಅಗಲಕ್ಕೆ ಆವರಿಸಿಕೊಂಡಿರೋ ಸರೋವರ ಅನೇಕ ದ್ವೀಪಗಳನ್ನು ಹೊಂದಿದ್ದು ಸ್ಥಳೀಯವಾಗಿ ಇವುಗಳನ್ನು “ಫುಮ್ಡೀ”ಗಳೆಂದು ಕರೆಯುತ್ತಾರೆ. ಅವುಗಳು ನೀರಿನ ಮೇಲ್ಮೈನಲ್ಲಿ ಹರಡಿಕೊಂಡಿರೋ ಹುಲ್ಲಿನ ಜೊಂಡುಗಳು ಹಾಗೂ ಸಸ್ಯಗಳ ಕೊಳೆತದಿಂದಾದ ರಚನೆಗಳ ಮೇಲೆಯೇ ಸ್ಥಾಪಿತವಾಗಿರೋ ಕಾರಣದಿಂದಾಗಿ ತೇಲುವ ದ್ವೀಪಗಳಾಗಿ ಮಾರ್ಪಟ್ಟಿವೆ.ಇವುಗಳಲ್ಲಿ ಥಾಂಗಾ,ಐಥಿಂಗ್ ಹಾಗೂ ಸೆಂಡ್ರಾ ದ್ವೀಪಗಳು ಪ್ರಮುಖವಾಗಿವೆ.
ಸೆಂಡ್ರಾ ದ್ವೀಪದಲ್ಲಿ ಬೋಟಿಂಗ್,ಕಯಾಕಿಂಗ್ ಸೇರಿದಂತೆ ಅನೇಕ ವಾಟರ್ ಸ್ಪೋರ್ಟ್ಸ್ ಅಡ್ವೆಂಚರ್ ಗಳ ಅನುಭವ ಪಡೆಯಬಹುದಾಗಿದ್ದು ಜೊತೆಗೆ ಅಲ್ಲಿಯೇ ತಂಗಲು ರೆಸಾರ್ಟುಗಳೂ ಲಭ್ಯವಿದೆ.


ಕೈಬುಲ್-ಲಾಮ್ಜೋ ನ್ಯಾಶನಲ್ ಪಾರ್ಕ್.
(keibul lamjao national park )
ಇದು ಜಗತ್ತಿನಲ್ಲಿಯೇ ಏಕೈಕ ತೇಲುವ ಉದ್ಯಾನವನವೆಂಬ ಖ್ಯಾತಿಯನ್ನು ಹೊಂದಿದ್ದು ಲೋಕ್ಟಕ್ ಸರೋವರದ ಮಧ್ಯಭಾಗದಲ್ಲಿರೋ ದ್ವೀಪವೊಂದರಲ್ಲಿ 40ಚದರ ಕಿಮೀ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ.ಹೆಬ್ಬಾವು,ಕರಡಿ,ಗಿಬ್ಬನ್ ಹಾಗೂ ಇನ್ನೂ ಹಲವು ಪ್ರಾಣಿ ಪಕ್ಷಿ ಪ್ರಬೇಧಗಳ ಜೊತೆಗೆ ಮಣಿಪುರದ “ರಾಜ್ಯಪ್ರಾಣಿ” ಯಾದ ಸಾಂಘಾಯ್ ಅಥವಾ ಡ್ಯಾನ್ಸಿಂಗ್ ಡೀರ್ ಎಂದು ಕರೆಯಲ್ಪಡೋ ಜಿಂಕೆಗಳನ್ನು ಇಲ್ಲಿ ಕಾಣಬಹುದು.


ಸಾಂಘಾಯ್.(Sangai Deer)
ಈ ಜಿಂಕೆಗಳ ವಿಶೇಷವೆಂದರೆ ಇಡೀ ವಿಶ್ವದಲ್ಲಿ ಇವುಗಳು ಕೇವಲ ಈ ದ್ವೀಪದಲ್ಲಷ್ಟೇ ಅಸ್ತಿತ್ವದಲ್ಲಿದ್ದು ವಿನಾಶದ ಅಂಚಿನಲ್ಲಿವೆ.ಆ ಕಾರಣದಿಂದಾಗಿ ಅಳಿವಿನಂಚಿನಲ್ಲಿರುವ ಇವುಗಳ ಸಂತತಿಯನ್ನು ಸಂರಕ್ಷಿಸಲು ವಿಶೇಷ ಗಮನ ಹರಿಸಲಾಗುತ್ತಿದ್ದು 1975ರಲ್ಲಿ ಕೇವಲ ಹದಿನಾಲ್ಕರಷ್ಟಿದ್ದ ಇವುಗಳ ಸಂಖ್ಯೆ ರಕ್ಷಿತ ಉದ್ಯಾನವನವೆಂಬ ಘೋಷಣೆಯ ನಂತರ ನೂರರ ಆಸುಪಾಸಿಗೆ ಬಂದು ನಿಂತಿದೆ.


ಲೇ-ಹರೋಬಾ ಉತ್ಸವ.
(lai haraoba festival)
ಮಣಿಪುರದ ಮೂಲನಿವಾಸಿಗಳಾದ ಮೈಥೇಯೀ ಬುಡಕಟ್ಟು ಜನಾಂಗದವರು ಪ್ರತೀವರ್ಷ ಮೇ ಎರಡನೇ ವಾರದಿಂದ ಜೂನ್ ಎರಡನೇ ವಾರದ ವರೆಗೆ ತಿಂಗಳು ಕಾಲ ಅತೀ ವಿಜ್ರಂಭಣೆಯಿಂದ ಆಚರಿಸಲ್ಪಡೋ ಉತ್ಸವವಿದು.ಈ ತಿಂಗಳಿನಲ್ಲಿ ದೇವರು ಭೂಮಿಗೆ ಆಗಮಿಸುತ್ತಾನೆಂದು ನಂಬೋ ಈ ಜನರು ಉಮಂಗ್ ಲೇ ಹಾಗೂ ಇನ್ನಿತರ 365 ದೇವತೆಗಳ ವಿಗ್ರಹಗಳನ್ನು ಗ್ರಾಮಗಳಿಂದ ಮೆರವಣಿಗೆಯ ಮುಖಾಂತರ ಕರೆತಂದು ಮೈದಾನವೊಂದರ ಬದಿಯಲ್ಲಿ ನಿರ್ಮಿಸಲಾಗಿರೋ ಮಂಟಪವೊಂದರಲ್ಲಿ ಪ್ರತಿಷ್ಟಾಪನೆ ಮಾಡಿ ಪೂಜೆ ಪುನಸ್ಕಾರ ನೈವೇದ್ಯಗಳ ಮೂಲಕ ಆರಾಧಿಸುತ್ತಾರೆ.ದಿನನಿತ್ಯ ವಿಶಿಷ್ಟವಾದ ನೃತ್ಯ ಹಾಡು ಸಂಗೀತಗಳಲ್ಲದೆ ಕುಸ್ತಿ,ಪೋಲೋ ಗಳಂತಹ ಸ್ಪರ್ಧೆಗಳೂ ಏರ್ಪಡಿಸಲಾಗಿರುತ್ತದೆ.ಮಣಿಪುರದ ಖಾದ್ಯಗಳ ರುಚಿ ನೋಡಬಯಸುವವರಿಗಂತೂ ಸುಗ್ಗಿ ಈ ಉತ್ಸವ.


ಪ್ರಮುಖ ಖಾದ್ಯಗಳು.

ಸಾಮಾನ್ಯವಾಗಿ ಎಣ್ಣೆಯನ್ನು ಬಳಸದೆಯೇ ಅಡುಗೆ ತಯಾರಿಸೋ ಮೈಥೇಯಿಗಳು ವಿಪರೀತ ಮೆಣಸು ಬಳಕೆ ಮಾಡುತ್ತಾರೆ ಅಡುಗೆಗಳಲ್ಲಿ.
ಎರೋಂಬಾ(ಮಿಕ್ಸ್ ವೆಜಿಟೇಬಲ್ಸ್ ವಿಥ್ ಫಿಶ್).ಸಿಂಜು(ಮೊಳಕೆ ಕಾಳು,ಸೊಪ್ಪಿನ ಸಲಾಡ್),ಕಾಂಗ್-ಹೂ(ವೆಜಿಟೇಬಲ್ಸ್ ವಿಥ್ ಹರ್ಬ್ಸ್),ಪಾಕನಮ್(ಪ್ಯಾನ್ ಕೇಕ್),ಊಟಿ(ಟಿಪಿಕಲ್ ಮಣಿಪುರಿ ಖಾದ್ಯ),ನಾ-ಥೋಂಗ್ಬಾ(ಮೀನು ಸಾರು),ಚಾಹೋ ಖೀರ್(ಕಪ್ಪು ಅಕ್ಕಿ ಕಿಚಡೀ).

ತಲುಪುವ ಬಗೆ.
ರಾಜಧಾನಿ ಇಂಫಾಲದಿಂದ ಸ್ಥಳೀಯ ಸಾರಿಗೆ,ಟೆಂಪೋ,ಶೇರಿಂಗ್ ರಿಕ್ಷಾಗಳು ಹಾಗೂ ಟ್ಯಾಕ್ಸಿಗಳು ಲಭ್ಯವಿದ್ದು ಸುಲಭವಾಗಿ ಸಂಪರ್ಕ ಸಾಧ್ಯವಿದೆ.
ಸ್ಥಳೀಯವಾಗಿ ದ್ವೀಪಗಳನ್ನು ಸಂದರ್ಶಿಸಲು ಸಾಕಷ್ಟು ಸಂಖ್ಯೆಯ ಬೋಟು,ದೋಣಿಗಳು ಸಿದ್ಧವಾಗಿರುತ್ತವೆ.

ಪ್ರಯಾಣಕ್ಕೆ ಸೂಕ್ತ ಕಾಲ.
ಸದಾ ತಂಪು ವಾತಾವರಣ ಹೊಂದಿರೋ ಕಾರಣದಿಂದಾಗಿ ವರ್ಷವಿಡೀ ಯಾವುದೇ ಕಾಲದಲ್ಲಿಯೂ ಸಂದರ್ಶಿಸಬಹುದಾಗಿದ್ದು,
ವಿಪರೀತ ಮಳೆಯಾಗುವುದರಿಂದ ಮಳೆಗಾಲವನ್ನು ಆದಷ್ಟೂ ಪಕ್ಕಕ್ಕಿಡೋದು ಸೂಕ್ತ.

ಸಮೀಪದ ವಿಮಾನ ನಿಲ್ದಾಣ :- ಇಂಫಾಲ.(45km)
ಸಮೀಪದ ರೈಲು ನಿಲ್ದಾಣ :- ದೀಮಾಪುರ (245km)

#Moirang #Loktak Lake #Lai haraoba festival #Sanghai Deer #Dancing Deer #Keibul lamjao national park #INA War memorial museum






Friday, June 8, 2018

             *****ರೂಪ್ ಕುಂಡ್ ಸರೋವರ*****
      (ರುದ್ರ ರಮಣೀಯ ಪದಕ್ಕೊಂದು ಅನ್ವರ್ಥನಾಮ)
(Roopkund Lake Trek Also known as Skeleton lake/Mysterious Lake) 

ಚಾರಣಿಗನೊಬ್ಬನಿಗೆ ನೀನು ಜೀವಮಾನದಲ್ಲೊಮ್ಮೆ ನೋಡಿಯೇ ತೀರಬೇಕೆಂಬ ಅತೀವ ಹಂಬಲವಿರೋ ಚಾರಣದ ಗಮ್ಯಗಳ ಪಟ್ಟಿಯೇನಾದರೂ ಮಾಡಲು ಹೇಳಿದಲ್ಲಿ, ಆ ಪಟ್ಟಿಯಲ್ಲಿ ಮೊದಲ ಸ್ಥಾನ ಮೌಂಟ್ ಎವರೆಸ್ಟ್ ಪರ್ವತದ್ದಾದರೆ, ಎರಡನೇ ಸ್ಥಾನ ಖಂಡಿತಾ “ರೂಪ್ ಕುಂಡ್” ಸರೋವರ ಆಕ್ರಮಿಸಿಕೊಂಡಿರುತ್ತದೆ.ಅತ್ಯಂತ ಕ್ಲಿಷ್ಟ ಹಾಗೂ ಕಠಿಣತೆಯಿಂದ ಕೂಡಿದ ಚಾರಣವಾಗಿದ್ದಾಗ್ಯೂ ಜನರ ಚಿತ್ತವನ್ನು ತನ್ನತ್ತ ಕೇಂದ್ರೀಕರಿಸುವಂತೆ ಮಾಡೋ ಅಯಸ್ಕಾಂತೀಯ ಗುಣವುಳ್ಳ ಚಾರಣವಿದು.

ಸಮುದ್ರ ಮಟ್ಟದಿಂದ ಸರಿಸುಮಾರು 16500 ಅಡಿ ಎತ್ತರದಲ್ಲಿ,ಹಿಮಛ್ಛಾದಿತ ದೈತ್ಯ ತ್ರಿಶೂಲ್ ಪರ್ವತ ಶ್ರೇಣಿಯ ಹೃದಯಭಾಗದಲ್ಲಿ,ಈಗಷ್ಟೇ ಎದೆಹಾಲು ಕುಡಿದು ಮುಗುಳ್ನಗುತ್ತಾ ಮಲಗಿರೋ ಮಗುವೊಂದರ ಮುದ್ದು ಮೊಗದಂತೆ ಭಾಸವಾಗೋ ಪುಟ್ಟ ಸರೋವರವೊಂದು ಇಷ್ಟೊಂದು ಆಕರ್ಷಣೆಯ ಕೇಂದ್ರ ಬಿಂದುವಾಗಲು,ಅದರ ಸುಂದರತೆಯೋ,ಆ ನೀರಿನಲ್ಲಿರೋ ಔಷಧೀಯ ಗುಣವೋ ಅಥವಾ ಅದರ ಪೌರಾಣಿಕ ಹಿನ್ನಲೆಯೋ ಕಾರಣವಾಗಿದೆಯೆಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆಯಷ್ಟೇ.ಯಾಕೆಂದರೆ ನಿಜಕ್ಕೂ ಜನರನ್ನು ಸೆಳೆಯುತ್ತಿರೋದು ಇದ್ಯಾವ ಸಂಗತಿಗಳೂ ಆಗಿರದೆ ನೂರಾರು ವರ್ಷಗಳಿಂದ ಸರೋವರದೊಳಗೆ ತಣ್ಣನೆ ಕುಳಿತಿರೋ ಮುನ್ನೂರಕ್ಕೂ ಹೆಚ್ಚು ಮಾನವನ ಅಸ್ಥಿಪಂಜರಗಳು ಸೇರಿದಂತೆ ಇನ್ನಿತರ ಆತನ ಅವಶೇಷಗಳು ಎಂದರೆ ನಂಬಲೇಬೇಕು.
 ಉತ್ತರಖಂಡ ರಾಜ್ಯದ ಚಮೋಲಿ ಜಿಲ್ಲೆಗೆ ಸೇರಿದಂತೆ ಆವರಿಸಿಕೊಂಡಿರೋ ತ್ರಿಶೂಲ್ ಪರ್ವತ ಸರಣಿಯ(ಮೂರು ಗಿರಿ ಶಿಖರಗಳು ತ್ರಿಶೂಲಾಕಾರಾದಲ್ಲಿ ಕಂಡು ಬರೋದ್ರಿಂದ ಈ ಹೆಸರು) ತಪ್ಪಲಿನಲ್ಲಿರೋ ಲೋಹಾರ್ ಜಂಗ್ ಎಂಬ ಪುಟ್ಟ ಹಳ್ಳಿಯಿಂದ ಮೊದಲಾಗಿ ಬರೋಬ್ಬರಿ ಎಪ್ಪತ್ತು ಕಿಲೋಮೀಟರುಗಳ ಕಾಲ್ನಡಿಗೆಯ ಚಾರಣವೊಂದು ಇದೇ ಹಳ್ಳಿಗೆ ಮರಳೋ ಮೂಲಕ ಮಂಗಳ ಹಾಡಲು ತೆಗೆದು ಕೊಳ್ಳೋದು ಸಂಪೂರ್ಣ ಒಂದು ವಾರ.ಸರೋವರಗಳ ನಗರಿಯೆಂದೇ ಪ್ರಖ್ಯಾತಿ ಹೊಂದಿರೋ ನೈನಿತಾಲ್ ನ ಕಾಟ್ ಗೋದಾಮ್ ನಿಂದ ರಾಣಿಖೇತ್,ಕೌಸಾನಿ,ದೇವಲ್ ಮಾರ್ಗವಾಗಿ 260 ಕಿಮೀ ಹಾದುಬಂದಲ್ಲಿ ಸಿಗೋ ಪುಟ್ಟ ಊರು ಲೋಹಾರ್ ಜಂಗ್.ಹೋಟೆಲ್,ಲಾಡ್ಜ್,ಎಟಿಎಮ್ ಅಥವಾ ಪೆಟ್ರೋಲ್ ಬಂಕ್ ಮೊದಲಾಗಿ ಯಾವೊಂದೂ ಸೌಲಭ್ಯಗಳಿಲ್ಲದ ಗ್ರಾಮವಿದು.


ಲೋಹಾರ್ ಜಂಗ್ ನಿಂದ ದಿದನಾ ಎಂಬ ಹಳ್ಳಿಯತ್ತ ಒಂಬತ್ತು ಕಿಮೀ ಸಾಗುವ ಮೂಲಕ ಮೊದಲ ದಿನದ ಚಾರಣಕ್ಕೊಂದು ತೆರೆ ಎಳೆಯಲಾಗುತ್ತದೆ.
ಪ್ರಯಾಣ ಮೊದಲಾಗುತ್ತಿದ್ದಂತೆಯೇ ನೀಲ್ ಗಂಗಾ ನದಿಗೆ ಅಡ್ಡಲಾಗಿ ಹಾಕಿರೋ ಕಬ್ಬಿಣದ ಸೇತುವೆಯೊಂದು ನಮ್ಮನ್ನು ಸ್ವಾಗತಿಸಲು ಸಿದ್ಧವಾದಂತೆ ನಿಂತಿರುತ್ತದೆ.ಇದನ್ನು ದಾಟಿದ ನಂತರದಲ್ಲಿ ಎರಡು ಆಯ್ಕೆಗಳಿರುತ್ತದೆ.ನೇರವಾಗಿ ಅರಣ್ಯ ಮಾರ್ಗದಲ್ಲಿ ಪರ್ವತಗಳನ್ನೇರುತ್ತಾ ದಿದನಾ ತಲುಪಬಹುದು,ಈ ಹಾದಿ ಉದ್ದವನ್ನು ಗಣನೆಗೆ ತೆಗೆದುಕೊಂಡರೆ ಸ್ವಲ್ಪ ಚಿಕ್ಕದೇ ಆದರೂ ಅತ್ಯಂತ ದುರ್ಗಮ ಹಾಗೂ ಚಾರಣಿಗನಿಗೊಂದು ಸವಾಲೆಸೆಯೋ ಹಾದಿಯಿದು.ಎರಡನೆಯದ್ದು ವಾಣ್ ಎಂಬ ಹಳ್ಳಿಯ ಮಾರ್ಗವಾಗಿ ಸಾಗಿ ಕುಲ್ಲಿಂಗ್ ಎಂಬ ಹಳ್ಳಿಯನ್ನು ಹಾಯ್ದು ದಿದನಾ ಸೇರಬಹುದು,ಇದು ಅಷ್ಟೇನೂ ಕಠಿಣವಲ್ಲದ ಆಗಾಗ ಕಾಣಿಸಿಕೊಳ್ಳೋ ಜನವಸತಿಯ ನಡುವೆ ಸಾಗುವ ಪಯಣವಿದು.ನಮ್ಮೀ ಚಾರಣದ ಹಾದಿಯಲ್ಲಿ ಸಿಗೋ ಕೊನೆಯ ಹಳ್ಳಿಯಿದು,ಇಲ್ಲಿಂದ ಮುಂದೆ ಸಂಪೂರ್ಣ ಹುಲ್ಲುಗಾವಲುಗಳೂ,ಓಕ್ ಮರಗಳಿಂದ ಕೂಡಿದ ಅರಣ್ಯ ಪ್ರದೇಶಗಳೂ,ಹಿಮಚ್ಛಾದಿತ ಪರ್ವತಗಳೇ ಜೊತೆಯಾಗುತ್ತಾ ಸಾಗುತ್ತವೆ.


 ಎರಡನೇ ದಿನ ಆಲಿ ಬುಗ್ಯಾಲ್ ಮಾರ್ಗವಾಗಿ ಸಾಗಿ ಹನ್ನೆರಡು ಕಿಲೋಮೀಟರ್ ಊರದಲ್ಲಿರೋ ಬೇದ್ನಿ ಬುಗ್ಯಾಲ್ ತಲುಪುವ ಚಾರಣ ಮೊದಲ ಹಂತದಲ್ಲಿ ಓಕ್ ಕಾಡುಗಳನ್ನು ದಾಟಿದ ನಂತರದಲ್ಲಿ ಸಂಪೂರ್ಣ ಹುಲ್ಲುಗಾವಲುಗಳಿಂದ ಕೂಡಿದ ಪರ್ವತಗಳಂಚಲ್ಲೇ ಸಾಗುತ್ತದೆ.ಇಡೀ ಚಾರಣದಲ್ಲಿಯೇ ಅತ್ಯಂತ ಮನಮೋಹಕ‌ ದೃಶ್ಯಗಳಿಂದ ಮನಸ್ಸಿಗೆ ಮುದನೀಡೋ ಪ್ರದೇಶವಿದು.
ಮೂರನೇ ದಿನ ಬೇದ್ನಿ ಬುಗ್ಯಾಲ್ ನಿಂದ 5ಕಿಮೀ ದೂರದಲ್ಲಿರೋ ಘೋರಾ ಲೋಟಾನಿ ಎಂಬಲ್ಲಿಗೆ ದಿನದ ಚಾರಣವನ್ನು ಅಂತ್ಯಗೊಳಿಸಲಾಗುತ್ತದೆ(ಅಂದೇ ಇಲ್ಲಿಂದ 6ಕಿಮೀ ದೂರದಲ್ಲಿರೋ ಭಾಗ್ವಾಭಾಸ ಎಂಬಲ್ಲಿಯ ವರೆಗೂ ಸಾಗಬಹುದಾಗಿದೆ.

ಇಲ್ಲಿ ಅಂತರಕ್ಕಿಂತಲೂ ಪ್ರಾಮುಖ್ಯತೆ ಪಡೆಯೋದು ಸಮುದ್ರಮಟ್ಟದಿಂದ ಇರೋ ಎತ್ತರಗಳು.ಬಹಳಷ್ಟು ಜನ ಈ ಎತ್ತರದ ಕಾರಣಕ್ಕಾಗಿ ತಲೆಸುತ್ತು,ಮೂಗಿನಿಂದ ರಕ್ತಸ್ರಾವ,ವಾಂತಿ ಇತ್ಯಾದಿ ಸಮಸ್ಯೆಗಳಿಗೊಳಪಡೋದ್ರಿಂದಾಗಿ ದಿನವೊಂದಕ್ಕೆ ಸರಾಸರಿ ಎರಡು ಸಾವಿರ ಅಡಿಗಳಷ್ಟೇ ಏರುವುದು ರೂಢಿಯಲ್ಲಿದೆ.)ಹಿಂದೆಲ್ಲಾ ರೂಪ್ ಕುಂಡ್ ಚಾರಣದಲ್ಲಿ ಕುದುರೆಗಳು ಹಾಗೂ ಖಚ್ಚರ್(ಗಂಡು ಕತ್ತೆ ಹಾಗೂ ಹೆಣ್ಣು ಕುದುರೆಯ ಸಮಾಗಮದಿಂದಾದ ಪ್ರಾಣಿ)ಗಳನ್ನು ಇಲ್ಲಿಯೇ ನಿಲ್ಲಿಸಿ ಮುಂದಿನ ಹಾದಿ ನಡೆದೇ ಸಾಗಬೇಕಿತ್ತು.ಆ ಕಾರಣಕ್ಕಾಗಿ ಈ ಜಾಗಕ್ಕೆ ಘೋರಾ ಲೋಟಾನೀ ಎಂಬ ಹೆಸರು ಬಂದಿದ್ದು.ಈಗ ಹಾಗೇನಿಲ್ಲ,ಭಾಗ್ವಾಭಾಸದವರೆಗೂ ಸಾಗಬಹುದಾಗಿದೆ.


ಮರುದಿನ ಘೋರಾ ಲೋಟಾನೀಯಿಂದ ಮೊದಲಾಗೋ ಚಾರಣ ಸಂಪೂರ್ಣ ಹಿಮದಿಂದಾವೃತ ಹಾದಿಯಲ್ಲಿಯೇ ಸಾಗುತ್ತದೆ,ಕಡಿದಾದ ರಸ್ತೆಗಳು ಒಂದೆಡೆಯಾದರೆ ಆಮ್ಲಜನಕದ ಕೊರತೆ ಇನ್ನೊಂದೆಡೆ ಚಾರಣಿಗನ ಆತ್ಮವಿಶ್ವಾಸಕ್ಕೊಂದು ದೊಡ್ಡ ಸವಾಲಾಗಿ ಪರಿಣಮಿಸಿಬಿಡುತ್ತವೆ.ಈ ದಿನದ ಚಾರಣದ ಪ್ರಮುಖ ಆಕರ್ಷಣೆ 14000 ಅಡಿ ಎತ್ತರದ ಪರ್ವತದ ತುದಿಯಲ್ಲಿರೋ ಪುಟ್ಟದಾದ ಕಾಲುವಿನಾಯಕ ಗುಡಿ.ಹಿಂದೆ ಪಾರ್ವತಿ ಸ್ನಾನಕ್ಕೆ ತೆರಳುವಾಗ ಗಣೇಶನನ್ನು ಇಲ್ಲಿಯೇ ಕಾವಲಿಗೆ ನಿಲ್ಲಿಸಿದ್ದ,ನಂತರದಲ್ಲಿ ಕೋಪೋದ್ರಿಕ್ತ ಶಿವ ಗಣೇಶನ ಶಿರಚ್ಛೇದನ ಮಾಡಿ ನಂತರದಲ್ಲಿ ಆನೆಯ ಮುಖ ಜೋಡಿಸಿದ ಜಾಗವೂ ಇದೆಂದು ಪ್ರತೀತಿಯಿದೆ.ಇಲ್ಲಿಂದ ಇನ್ನೊಂದು ಮಗ್ಗುಲಿಗೆ ಇಳಿಮುಖವಾಗಿ ಸಾಗುತ್ತಾ ತಲುಪೋದು ಭಾಗ್ವಾಭಾಸ,ಇದು ರೂಪ್ ಕುಂಡ್ ಚಾರಣದ ಬೇಸ್ ಕ್ಯಾಂಪ್ ಕೂಡಾ ಆಗಿದ್ದು ಇಲ್ಲಿ ಉಳಿದುಕೊಳ್ಳಲು ಪುಟ್ಟ ಬಂಕರ್ ಗಳನ್ನು ನಿರ್ಮಿಸಲಾಗಿದ್ದು ಅದರ ಅನುಕೂಲ ಪಡೆಯಬಹುದು.


ಇಂದು ಇಡೀ ಚಾರಣದಲ್ಲಿಯೇ ಅತ್ಯಂತ ಪ್ರಮುಖ ಹಾಗೂ ಸುಧೀರ್ಘ ಚಾರಣವೊಂದಕ್ಕೆ ಸಾಕ್ಷಿಯಾಗುತ್ತೇವೆ ಏಕೆಂದರೆ ಭಾಗ್ವಾಭಾಸದಿಂದ ಹೊರಟು ರೂಪ್ ಕುಂಡ್ ವೀಕ್ಷಿಸೋದು ಒಂದು ಕಾರಣವಾದರೆ ಮರಳಿ ಬೇದ್ನೀ ಬುಗ್ಯಾಲ್ ವರೆಗೆ ತಲುಪಬೇಕಾದ 22ಕಿಮೀ ಚಾರಣ ಒಂದೇ ದಿನದಲ್ಲಿ ಕ್ರಮಿಸಬೇಕಾದ ಅನಿವಾರ್ಯತೆ ಇರುತ್ತದೆ.

ಭಾಗ್ವಾಭಾಸದಿಂದ ಹೊರಟು ರೂಪ್ ಕುಂಡ್ ಸರೋವರ ತಲುಪುತ್ತಿದ್ದಂತೆಯೇ ನಮ್ಮನ್ನು ಸ್ವಾಗತಿಸೋದು ಅಸ್ಥಿಪಂಜರ ಹಾಗೂ ತಲೆ ಬುರುಡೆಗಳ ರಾಶಿಯ ಗುಡಿಯೊಂದು.ಸರೋವರದ ಮೇಲ್ಭಾಗದಲ್ಲಿ ಅಲ್ಲಿ ಮಡಿದವರಿಗೆ ಸಂತಾಪ ಸೂಚಿಸುವ ನಿಟ್ಟಿನಲ್ಲಿ ಕಲ್ಲುಗಳನ್ನು ಜೋಡಿಸಿ ನಡುವಲ್ಲಿ ಅಸ್ಥಿಪಂಜರಗಳನ್ನಿಟ್ಟು ಪುಟ್ಟದೊಂದು ಸ್ಮಾರಕವೊಂದನ್ನು ಸ್ಥಾಪಿಸಲಾಗಿದೆ,ಅವುಗಳಿಗೊಂದು ನಮನ ಸಲ್ಲಿಸಿ ಸಾಗುತ್ತಿದ್ದಂತೆಯೇ ಶಿವನ ಕಪಾಲದಂತೆ ಕಾಣೋ ರಚನೆಯೊದರ ನಡುವಲ್ಲಿ ನಮ್ಮ ದಾರಿಯೇ ಎದುರು ನೋಡುತ್ತಾ ಕುಳಿತಿರುವಂತೆ ಭಾಸವಾಗೋ ಪುಟ್ಟ ಸರೋವರದ ದರ್ಶನವಾಗುತ್ತದೆ.ನೀರು ಹೆಪ್ಪುಗಟ್ಟಿರದೇ ಇದ್ದಲ್ಲಿ ಅತ್ಯಂತ ಶುಭ್ರವಾದ ನೀರಿನಿಂದಾಗಿ ಸ್ಪಷ್ಟವಾಗಿ ನೀರಿನೊಳಗಿರೋ ಅಸ್ಥಿಪಂಜರಗಳ ಜೊತೆಜೊತೆಗೇ ಮೇಲ್ಬಾಗದಲ್ಲಿ ತೇಲುತ್ತಿರೋ ಚರ್ಮದ ಚಪ್ಪಲಿಗಳು,ಮರದ ಕಲಾಕೃತಿಗಳು,ಲೋಹದ ಆಯುಧಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ವೀಕ್ಷಿಸಬಹುದಾಗಿದೆ.ವಾತಾವರಣ ಸಹಕಾರಿಯಾಗಿದ್ದಲ್ಲಿ ಸರೋವರದ ಮೇಲ್ಬಾಗದಲ್ಲಿರೋ ಜುನಾರ್ ಗಲ್ ಪಾಸ್ ವರೆಗೂ ಚಾರಣಮಾಡಬಹುದು ಜೊತೆಗೇ ಅಲ್ಲಿಂದ ರೂಪ್ ಕುಂಡ್ ಗ್ಲೇಶಿಯರ್,ತ್ರಿಶೂಲ್,ನಂದಾ ಗುಂಟಿ,ಚೌಕ್ ಹಂಬಾ ಪರ್ವತಗಳ ಅದ್ಭುತ ದೃಶ್ಯಗಳನ್ನೂ ಕಣ್ತುಂಬಿಕೊಳ್ಳಬಹುದು.




ಇಲ್ಲಿಂದ ಮರಳಿ ಭಾಗ್ವಾಭಾಸ ತಲುಪಿ ಅಲ್ಲಿಯೇ ಇರುಳು ಕಳೆದು ಮರುದಿನ ಪ್ರಯಾಣ ಮುಂದುವರೆಸಬಹುದಾದರೂ ಸಾಮಾನ್ಯವಾಗಿ ಅಂದೇ ಬೇದ್ನಿ ಭುಗ್ಯಾಲ್ ತಲುಪಿ ವಿರಮಿಸೋದು ಅಲ್ಲಿನ ವಾತಾವರಣದ ದೃಷ್ಟಿಯಿಂದ ಸೂಕ್ತ.ಮರುದಿನ ಬೇದ್ನಿ ಭುಗ್ಯಾಲಿನಿಂದ ವಾಣ್ ವರೆಗೂ ಟ್ರೆಕ್ ಮಾಡಿ ಅಲ್ಲಿಂದ ಸ್ಥಳೀಯವಾಗಿ ಲಭ್ಯವಿರೋ ಜೀಪುಗಳ ಮೂಲಕ ಲೋಹಾರ್ ಜಂಗ್ ತಲುಪೋ ಮುಖಾಂತರ ಅತ್ಯದ್ಭುತ ಹಾಗೂ ರೋಮಾಂಚಕ ಚಾರಣವೊಂದಕ್ಕೆ ತೆರೆ ಎಳೆದಂತಾಗುತ್ತದೆ.


ಸ್ಥಳೀಯ ಪ್ರೇಕ್ಷಣೀಯ ತಾಣಗಳು.
ಸರೋವರಗಳ ನಾಡೆಂದೇ ಖ್ಯಾತಿಯ ನೈನಿತಾಲ್,ಚೈನಾ ಪೀಕ್,ಕೇವ್ ಗಾರ್ಡನ್,ಸ್ಕೀಯಿಂಗ್ ನ ತವರೂರು ಔಲಿ,ಬ್ರಹ್ಮತಾಲ್ ಸರೋವರ,ಶಂಕರಾಚಾರ್ಯರು ತಪಸ್ಸು ಮಾಡಿದ ಗುಹೆ ಹಾಗೂ ದೇವಸ್ಥಾನವಿರೋ ಜೋಷಿಮಠಗಳನ್ನು ವೀಕ್ಷಿಸಬಹುದು.


ಕಲ್ಲು ವಿನಾಯಕ ಗುಡಿ.
ಘೋರಾ ಲೋಟಾನೀ ಯಿಂದ ಭಾಗ್ವಾಭಾಸ ಸಾಗುವ ಹಾದಿಯಲ್ಲಿ ಪರ್ವತದ ಮೇಲ್ಭಾಗದಲ್ಲಿ ಕಲ್ಲುಗಳನ್ನು ಜೋಡಿಸಿ ಪುಟ್ಟ ಗುಡಿಯೊಂದನ್ನು ರಚಿಸಲಾಗಿದ್ದು ಕಪ್ಪು ಶಿಲೆಯ ಗಣೇಶನ ವಿಗ್ರಹವನ್ನು ಸ್ಥಾಪಿಸಿಡಲಾಗಿದೆ.ಈ ಸ್ಥಳದಲ್ಲಿಯೇ ಪಾರ್ವತಿ ಗಣೇಶನನ್ನು ಸೃಷ್ಟಿಸಿ ಕಾವಲಿಗೆ ನಿಲ್ಲಿಸಿ ಸ್ನಾನಕ್ಕೆ ತೆರಳಿದ್ದಳೆಂದೂ,ತನ್ನನ್ನು ತಡೆದನೆಂಬ ಕಾರಣಕ್ಕೆ ಕೋಪೋದ್ರಿಕ್ತನಾಗಿ ಈಶ್ವರ ಈತನ ಶಿರಚ್ಛೇದನ ಮಾಡಿದನೆಂದೂ ಪ್ರತೀತಿಯಿದೆ.ಆ ಕಾರಣಕ್ಕಾಗಿಯೇ ಚಾರಣಿಗರು ಯಾವುದೇ ಅನಾಹುತವಾಗದಂತೆ ಚಾರಣ ಯಶಸ್ವಿಯಾಗಲೆಂದು ಈ ಗಣೇಶನಿಗೆ ಗಂಟೆಯೊಂದನ್ನು ಅರ್ಪಿಸುತ್ತೇವೆಂಬ ಹರಕೆ ಮಾಡಿಕೊಂಡು ತಮ್ಮೊಂದಿಗೆ ತಂದಿದ್ದ ಗಂಟೆಯನ್ನು ಇಲ್ಲಿ ಕಟ್ಟಿ ಮುಂದೆ ಸಾಗೋದು ವಾಡಿಕೆ.


ನೈನಿತಾಲ್.
ನೈನೀ ಸರೋವರದ ತಟದಲ್ಲಿರೋ ಸುಂದರ ನಗರಿಯಿದು.
ದೋಣಿ ವಿಹಾರ ಅಥವಾ ಬೋಟ್ ಹೌಸುಗಳಲ್ಲಿನ ವಾಸದ ಅನುಭವ ಪಡೆಯಲು ಸೂಕ್ತ ಸ್ಥಳ.ಇದಲ್ಲದೆ ಪ್ಯಾರಾ ಗ್ಲೈಡಿಂಗ್ ರೋಪ್ ಲೇನ್ ನಂತಹ ಹಲವು ಸಾಹಸೀ ಕ್ರೀಡೆಗಳಿಗೆಂದೇ ಪ್ರಖ್ಯಾತ ಟಿಫನ್ ಟಾಪ್,ಕಿಲ್ ಬುರೀ ಪಕ್ಷಿಧಾಮ,ರೋಚಕ ಗುಹೆಗಳ ಪಾರ್ಕ್ ಕೂಡಾ ಆಕರ್ಷಣೆಯ ಕೇಂದ್ರಬಿಂದು.ಇಲ್ಲಿ ಬೂಗರ್ಭದೊಳಗಿನ ಕೌತುಕಗಳ ಪರೀವೀಕ್ಷಣೆಯೂ ಲಭ್ಯ.


ಬ್ರಹ್ಮತಾಲ್.
ಬ್ರಹ್ಮಾಂಡವನ್ನು ಸೃಷ್ಟಿಸಿ ಜನರ ಹಣೆಬರಹ ಬರೆಯೋ ಸಮಯದಲ್ಲಿ ಬ್ರಹ್ಮ ತಪಸ್ಸಿಗೆ ಕುಳಿತಿದ್ದನೆನ್ನುವ ನಂಬಿಕೆ ಇಲ್ಲಿನ ಜನರಲ್ಲಿದ್ದು ಈಗಲೂ ತನ್ನ ಧ್ಯಾನ ಸಾಧನೆಗೆ ಇಲ್ಲಿಗೇ ಬರುತ್ತಾನೆಂದು ನಂಬುತ್ತಾರೆ.ಅಗಾಗಿಯೇ ಪ್ರತೀ ವರ್ಷ ನಿಗದಿತ ದಿನದಂದು ಸರೋವರಕ್ಕೆ ಪೂಜೆ ಸಲ್ಲಿಸಿ ಬ್ರಹ್ಮದೇವನಿಗೆ ನೈವೇದ್ಯ ಅರ್ಪಿಸಿ ಬರುತ್ತಾರೆ.ಚಮೋಲಿ ಜಿಲ್ಲೆಯ ಮುಂಡೋಲಿ ಎಂಬಲ್ಲಿರೋ ಈ ಸರೋವರ ಪ್ರೇಕ್ಷಣೀಯ ಸ್ಥಳವಷ್ಟೇ ಅಲ್ಲದೆ ಸ್ಥಳೀಯರ ಶೃದ್ಧಾಕೇಂದ್ರವೂ ಹೌದು.


ಔಲೀ..
ಏಷ್ಯಾ ಖಂಡದಲ್ಲಿಯೇ ಎರಡನೆಯ ಅತ್ಯಂತ ಉದ್ದ ಹಾಗೂ ಎತ್ತರದ ರೋಪ್ ವೇ ಹೊಂದಿರೋ ಪ್ರದೇಶವಿದು,ಸ್ಕೀಯಿಂಗ್ ಪ್ರಿಯರಿಗಾಗಿ ಚಳಿಗಾಲದಲ್ಲಿ ವಿಶೇಷ ತರಬೇತಿಯೂ ಸೇರಿದಂತೆ ಅನೇಕ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ.ಇಲ್ಲಿಯೇ ಉಳಿದುಕೊಳ್ಳಲು ರೆಸಾರ್ಟ್ ಗಳ ವ್ಯವಸ್ಥೆಯೂ ಇದೆ.


ತಲುಪುವ ಬಗೆ...
ಸಮೀಪದ ವಿಮಾನ ನಿಲ್ದಾಣ :- ಪಂತ್ ನಗರ್.
ಸಮೀಪದ ರೈಲ್ವೇ ನಿಲ್ದಾಣ :- ಕಾಠ್ ಗೋದಾಮ್.ಹರಿದ್ವಾರ
ರಸ್ತೆ ಮಾರ್ಗ :- ನೈನಿತಾಲಿನಿಂದ ಹಾಗೂ ಋಷಿಕೇಶದಿಂದ ಬಸ್ ಸೌಲಭ್ಯವಿದೆ.
ಉಳಿದುಕೊಳ್ಳಲು...
ನೈನಿತಾಲ್ ನಲ್ಲಿ ಸಾಕಷ್ಟು ಸಂಖ್ಯೆಯ ಬೋಟ್ ಹೌಸ್,ಹೋಟೆಲ್ಗಳು ಲಭ್ಯವಿದೆ.
ಲೋಹಾರ್ ಜಂಗ್ ನಲ್ಲಿ ಪತ್ವಾಲ್ ಹೋಟೆಲ್ ಸೇರಿದಂತೆ ಅನೇಕ ಹೋಮ್ ಸ್ಟೇ ಗಳು ಲಭ್ಯವಿದೆ.
ದಿದನಾ ಹಾಗೂ ವಾಣ್ ಗ್ರಾಮಗಳಲ್ಲಿ ಹೋಮ್ ಸ್ಟೇಗಳು ಲಭ್ಯವಿದೆ.

#RoopkundTrekk #SkeletonLake #MysteriousLake #BrahmatalLake